ವಿಟ್ಲ : ಮುಸ್ಲಿಂ ವಿದ್ಯಾರ್ಥಿ ಜೊತೆ ಹಿಂದೂ ವಿದ್ಯಾರ್ಥಿನಿ ಲವ್ – ವಿಚಾರಣೆ ವೇಳೆ ಬ್ಯಾಗ್ ನಲ್ಲಿ ಸಿಕ್ತು ಪ್ರೇಮಪತ್ರ : ಪ್ರಾಂಶುಪಾಲರು ಹೇಳೋದೇನು?

ನ್ಯೂಸ್ ಆ್ಯರೋ : ಹಿಂದೂ ವಿದ್ಯಾರ್ಥಿನಿಯೊಬ್ಬಳು ಮುಸ್ಲಿಂ ವಿದ್ಯಾರ್ಥಿಗೆ ಪ್ರೇಮ ಪತ್ರ ಬರೆದ ವಿಚಾರವಾಗಿ ಗೊಂದಲ ಉಂಟಾಗಿ ಎರಡು ಕೋಮಿಗೆ ಸೇರಿದ ಕೆಲ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕಾಲೇಜಿಗೆ ಬಾರದೆ ಪರೀಕ್ಷೆಗೆ ಹಾಜರಾಗುವಂತೆ ಸೂಚನೆ ನೀಡಿದ ಘಟನೆ ವಿಟ್ಲದ ವಿಟ್ಲದ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಖಾಸಗಿ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಹಿಂದೂ ವಿದ್ಯಾರ್ಥಿನಿ ಮತ್ತು ಮುಸ್ಲಿಂ ವಿದ್ಯಾರ್ಥಿ ಕೆಲ ತಿಂಗಳ ಹಿಂದಿನಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರ ಶಾಲಾ ಪ್ರಾಂಶುಪಾಲರಿಗೆ ತಿಳಿದು ಅವರು ಇಬ್ಬರು ವಿದ್ಯಾರ್ಥಿಗಳ ಸಹಿತ ಅವರ ಪೋಷಕರನ್ನು ಕರೆಯಿಸಿ ಇನ್ನು ಮುಂದೆ ಇಂತಹ ಕೃತ್ಯ ನಡೆಯಬಾರದು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದರು.
ಬಳಿಕದ ದಿನಗಳಲ್ಲಿ ಅಲ್ಪ ಕಡಿಮೆಯಾಗಿದ್ದ ಅವರ ಪ್ರೇಮ ಪ್ರಕರಣ ವಾರದ ಹಿಂದೆ ಮತ್ತೆ ಬಹಿರಂಗಗೊಂಡಿತ್ತು. ಈ ಬಗ್ಗೆ ಮಾಹಿತಿ ಅರಿತ ಪ್ರಾಂಶುಪಾಲರು ವಿಚಾರಣೆ ನಡೆಸಿದಾಗ ಬಾಲಕಿಯ ಬ್ಯಾಗ್ ನಲ್ಲಿ ಪ್ರೇಮಪತ್ರವೊಂದು ಲಭಿಸಿತ್ತು. ಆದರೆ ಆ ದಿನ ವಿದ್ಯಾರ್ಥಿ ಕಾಲೇಜಿಗೆ ಹಾಜರಾಗಿರಲಿಲ್ಲ. ವಿದ್ಯಾರ್ಥಿನಿಯ ಪೋಷಕರನ್ನು ಕರೆಸಿದ ಪ್ರಾಂಶುಪಾಲರು ಇನ್ನು ಮುಂದೆ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಕಳಿಸುವುದು ಬೇಡ ಆಕೆಗೆ ಬೇಕಾದ ಎಲ್ಲಾ ಪಾಠಗಳನ್ನು ಆನ್ ಲೈನ್ ಮೂಲಕ ಮಾಡಿ ಪರೀಕ್ಷೆಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅದಕ್ಕೆ ಒಪ್ಪಿಗೆ ಸೂಚಿಸಿದ ಪೋಷಕರ ತಾಯಿ ವಿದ್ಯಾರ್ಥಿನಿಯೊಂದಿಗೆ ಮನೆಗೆ ತೆರಳಿದ್ದರು.
ಮರುದಿನ ವಿದ್ಯಾರ್ಥಿಯ ಪೋಷಕರನ್ನು ಬರುವಂತೆ ಪ್ರಾಂಶುಪಾಲರು ತಿಳಿಸಿದ್ದರು. ಅವರು ಮಧ್ಯಾಹ್ನದ ಬಳಿಕ ಬರುವುದಾಗಿ ತಿಳಿಸಿದ್ದರು. ಆದರೆ ವಿದ್ಯಾರ್ಥಿ ಬೆಳಗ್ಗೆಯೇ ಕಾಲೇಜಿಗೆ ಬಂದು ತರಗತಿಯಲ್ಲಿ ಹಾಜರಾಗಿದ್ದುದರಿಂದ ಆಕ್ರೋಶಗೊಂಡ ಕೆಲ ಹಿಂದೂ ವಿದ್ಯಾರ್ಥಿಗಳು ಆತನನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಈ ಬಗ್ಗೆ ಮಾಹಿತಿ ಅರಿತ ಪ್ರಾಂಶುಪಾಲರು ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಬರುವಂತೆ ಸೂಚಿಸಿದರು. ಮೊದಲ ವಿದ್ಯಾರ್ಥಿನಿಗೆ ಹೇಳಿದಂತೆ ಪರೀಕ್ಷೆಗೆ ಹಾಜರಾಗುವಂತೆ ಇತರ ವಿದ್ಯಾರ್ಥಿಗಳಿಗೂ ಪ್ರಾಂಶುಪಾಲರು ಸೂಚನೆ ನೀಡಿ ಕಳುಹಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ನಾವು ಯಾರನ್ನೂ ಅಮಾನತು ಮಾಡಿಲ್ಲ. ಶಾಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಬಾರದಂತೆ ತಿಳಿಸಿದ್ದೇವೆ. ಆದರೆ ಅವರಿಗೆ ಆನ್ ಲೈನ್ ಮೂಲಕ ಪಾಠ ಮಾಡುವುದಾಗಿ ತಿಳಿಸಿ ಅವರನ್ನು ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದ್ದೇವೆ ಎಂದು ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ.