ನ್ಯೂಸ್ ಆ್ಯರೋ : ಮಂಗಳೂರಿನ ಬಿಜೈ ಮೂಲದ ಯುವತಿ ಭಟ್ಕಳ ಮೂಲದ ಮುಸ್ಲಿಂ ಯುವಕನ ಜೊತೆ ಬೆಂಗಳೂರಿಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ಸಂಘ ಪರಿವಾರದ ಕಾರ್ಯಕರ್ತರು ತಡೆದು ಪೋಲಿಸರಿಗೆ ಒಪ್ಪಿಸಿದ ಘಟನೆ ಕಳೆದ ತಡರಾತ್ರಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಡೆದಿದೆ.
ಮಂಗಳೂರಿನ ಬಿಜೈ ಮ್ಯೂಸಿಯಂ ಬಳಿಯ ನಿವಾಸಿ 25 ವರ್ಷ ಪ್ರಾಯದ ಯುವತಿ ಭಟ್ಕಳ ಮೂಲದ ವಕೀಲನೊಬ್ಬನೊಂದಿಗೆ ಬಸ್ ನಲ್ಲಿ ತೆರಳುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಂಘಪರಿವಾರದ ಕಾರ್ಯಕರ್ತರು ಬಸ್ ತಡೆದು ಯುವತಿಯನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಯುವತಿ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಾರ್ಯಕರ್ತರ ಮಾತಿಗೆ ಬೆಲೆ ನೀಡದ ಯುವತಿ ಪ್ರಶ್ನಿಸಲು ನೀವು ಯಾರು? ನನ್ನ ಹಣದಲ್ಲಿ ನಾನು ಎಲ್ಲಿ ಬೇಕಾದರೂ ಹೋಗುತ್ತೇನೆ, ನಿಮಗೇನು ಎಂದು ದಬಾಯಿಸಿದ್ದಾಳೆ. ಇದಕ್ಕೆ ಪ್ರತಿಯಾಗಿ ಕಾರ್ಯಕರ್ತರೂ ಕೂಡ ಆಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮೊದಲೇ ಸ್ಥಳಕ್ಕೆ ಬಂದ ಪೊಲೀಸರು ಯುವಕ ಹಾಗೂ ಯುವತಿಯನ್ನು ಹಾಗೂ ಕಾರ್ಯಕರ್ತರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಯುವಕ,ಯುವತಿಯ ಪೋಷಕರನ್ನು ಕರೆಸಿ ಮಾತುಕತೆ ನಡೆಸಿ ಕಳುಹಿಸಿದ್ದಾರೆ ಎನ್ನಲಾಗಿದ್ದು, ಯಾವುದೇ ಹಲ್ಲೆ ನಡೆಯದ ಕಾರಣ ನೈತಿಕ ಪೋಲಿಸ್ ಗಿರಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..