ಬೆಳ್ತಂಗಡಿ : ನಡೆದಾಡಲು ಸಾಧ್ಯವಾಗದ ಯುವಕನ ಬಾಳಿನಲ್ಲಿ ಕಾರಣಿಕ ಮೆರೆದ ಆರಿಕೋಡಿ ಚಾಮುಂಡೇಶ್ವರಿ – ವೈರಲ್ ಸುದ್ದಿಯ ಅಸಲಿಯತ್ತೇನು?

ನ್ಯೂಸ್ ಆ್ಯರೋ : ನಡೆದಾಡಲು ಸಾಧ್ಯವಾಗದ ಯುವಕನ ಬಾಳಿನಲ್ಲಿ ಶಕ್ತಿಯೊಂದು ತನ್ನ ಕಾರಣಿಕವನ್ನು ಮೆರೆಯುವ ಮೂಲಕ ಯುವಕನನ್ನು ನಡೆದಾಡುವಂತೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲಿನ ಆರಿಕೋಡಿ ಎಂಬಲ್ಲಿ ನಡೆದಿದೆ ಎನ್ನಲಾದ ಸುದ್ದಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇಲ್ಲಿನ ಆರಿಕೋಡಿ ಎಂಬ ಪ್ರದೇಶದಲ್ಲಿ ನೆಲೆ ನಿಂತಿರುವ ತಾಯಿ ಚಾಮುಂಡೇಶ್ವರೀ ದೇವಿಯೇ ಬೇಡಿ ಬಂದ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ, ಇಷ್ಟಾರ್ಥಗಳನ್ನು ನೆರವೇರಿಸುವ ಮೂಲಕ ಕಾರಣಿಕವನ್ನು ಮೆರೆಯುತ್ತಿರುವ ಶಕ್ತಿ ಎಂಬುದಾಗಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾಳೆ.
ಕಡಬ ಮೂಲದ ಯುವಕನೊಬ್ಬನಿಗೆ ಸುಮಾರು ವರ್ಷಗಳಿಂದ ಯುವಕನಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ತಂದೆ ತಾಯಿಯೇ ಮಗನನ್ನು ಎತ್ತಿಕೊಂಡು ಹೋಗಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದರು.

ಅತೀವ ಕಷ್ಟದಲ್ಲಿದ್ದು ಕುಟುಂಬವು ಅರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಸನ್ನಿಧಿಗೆ ಬಂದು ನೋವನ್ನು ಹೇಳಿಕೊಂಡಿದ್ದರು. ಇವರ ಕಷ್ಟ ಆಲಿಸಿ ಕೇವಲ ಒಂದು ತಿಂಗಳಲ್ಲಿ ನಡೆದಾಡುವಂತೆ ಮಾಡುತ್ತೇನೆ ಎಂದು ತಾಯಿ ಅಭಯ ನುಡಿದಿದ್ದಾಳೆ. ಅದರಂತೆ ಇದೀಗ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಆಶೀರ್ವಾದದಿಂದ ಯುವಕ ಎಲ್ಲರಂತೆ ಆರಾಮವಾಗಿ ನಡೆದಾಡುವಂತಾಗಿದೆ ಎನ್ನಲಾದ ಸುದ್ದಿ ಭಾರೀ ವೈರಲ್ ಆಗಿದೆ.
ಯುವಕ ಮೊದಲಿನಂತಾದ ಹಿನ್ನೆಲೆಯಲ್ಲಿ ಯುವಕನ ಮನೆ ಮಂದಿ ತಾಯಿಯ ಸನ್ನಿಧಿಗೆ ಬಂದು ವಿಶೇಷ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಈಗಿನ ಕಾಲದಲ್ಲೂ ಇಂತಹ ಪವಾಡ ಸಾಧ್ಯವೇ ಎಂದು ಹಲವರು ಮೂಗಿನ ಮೇಲೆ ಬೆರಳಿಟ್ಟರೆ, ಇನ್ನೂ ಕೆಲವು ಆಸ್ತಿಕರು ಇದು ದೇವರ ಪವಾಡ ನಿಜ ಅನ್ನುತ್ತಿದ್ದಾರೆ.

ಒಟ್ಟಿನಲ್ಲಿ ಈ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಿದ್ದು, ಸಹಜವಾಗಿಯೇ ಕುತೂಹಲ ಮೂಡಿಸಿದೆ.