ನ್ಯೂಸ್ ಆ್ಯರೋ : ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಿಂದ ಶ್ರೀ ಕ್ಷೇತ್ರ ಶಬರಿಮಲೆಗೆ ಯಾತ್ರೆ ಹೊರಟಿದ್ದ ಮಿನಿ ಬಸ್ ವೊಂದು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ನಡೆದಿದೆ.
ವಾಹನದಲ್ಲಿ ಒಟ್ಟು 21 ಜನ ಪ್ರಯಾಣಿಕರಿದ್ದು ಹಲವರಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರಂಭಿಕ ಮಾಹಿತಿ ಬಂದಿದೆ. ಗಾಯಾಳುಗಳನ್ನು ಶಶಿ, ಜಲಾಧರ, ರಘು, ಬಸವರಾಜ್ ಮತ್ತು ಲೋಕ ಎಂದು ಗುರುತಿಸಲಾಗಿದೆ.
ವಾಹನದ ಬ್ರೇಕ್ ಫೈಲ್ ಆಗಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಅಪಘಾತ ನಡೆದ ಜಾಗ ಇಳಿಜಾರಾಗಿದ್ದು, ವಾಹನದ ಬ್ರೇಕ್ ಫೈಲ್ ಆದ ವಿಚಾರ ತಿಳಿಯುತ್ತಲೇ ಚಾಲಕ ಸಮಯಪ್ರಜ್ಞೆ ಮೆರೆದಿದ್ದು ವಾಹನವನ್ನು ರಸ್ತೆ ಪಕ್ಕದ ಪೊದೆಯ ಕಡೆಗೆ ಚಲಿಸುವಂತೆ ಮಾಡಿ ನಿಯಂತ್ರಣಕ್ಕೆ ತಂದಿದ್ದರಿಂದ ಭಾರೀ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಒಂದು ಕಡೆ ಆಳ ಕಂದಕ, ಇನ್ನೊಂದೆಡೆ ವಿದ್ಯುತ್ ಕಂಬ ಇದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಚಾಲಕನ ಸಮಯಪ್ರಜ್ಞೆ ಹಲವರ ಜೀವ ಉಳಿಸಿದೆ.
ಅಪಘಾತ ನಡೆದ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ನೆರವಿಗೆ ಆಗಮಿಸಿದ್ದು, ಮೂರ್ನಾಲ್ಕು ಆಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..