ಬೇರೆಯವರ ಖಾತೆಗೆ ಮಿಸ್ ಆಗಿ ಹಣ ವರ್ಗಾಯಿಸಿದ್ರಾ? ಡೋಂಟ್ ವರಿ! – ಹೀಗೆ ಮಾಡಿದ್ರೆ ಹಣ ವಾಪಸ್ ಪಡೆಯಬಹುದು..

ನ್ಯೂಸ್ ಆ್ಯರೋ : ಪ್ರಸ್ತುತ ದಿನಗಳಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾವಣೆ ಮಾಡುವುದು ತುಂಬಾ ಸುಲಭವಾಗಿದೆ. ಸಾಮಾನ್ಯವಾಗಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಗಳಿಗೆ ಸುತ್ತಾಡಬೇಕಾಗುತ್ತಿತ್ತು. ಆದರೆ, ನೂತನ ಆವಿಷ್ಕಾರಗಳಿಂದಾಗಿ ಈಗ ಅದರ ಅಗತ್ಯವಿಲ್ಲ. ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದ ಹಲವು ತೊಂದರೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ. ಕೇವಲ ಮೊಬೈಲ್ ಮೂಲಕ ಚಿಟಿಕೆ ಹೊಡೆಯುವುದರಲ್ಲಿ ಹಣ ಟ್ರಾನ್ಸ್ಫರ್ ಮಾಡಬಹುದಾಗಿದೆ.
ಹೊಸ ಆವಿಷ್ಕಾರಗಳು ನಮ್ಮ ಕೆಲಸಗಳನ್ನು ಎಷ್ಟು ಸರಳ ಮಾಡುತ್ತವೋ ಕೆಲವೊಮ್ಮೆ ಅಷ್ಟೇ ಅವಾಂತರ ಸೃಷ್ಟಿಸುತ್ತವೆ. ತಂತ್ರಜ್ಞಾನ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಸುಲಭಗೊಳಿಸಿವೆ. ಆದರೆ, ಇನ್ನೊಂದೆಡೆ ತೊಂದರೆಗಳೂ ಕೂಡ ಎದುರಾಗುತ್ತವೆ. ಉದಾಹರಣೆಗೆ ಹಣ ವರ್ಗಾವಣೆಯ ವೇಳೆ ತಪ್ಪಾಗಿ ಬೇರೆ ಖಾತೆಗೆ ಹಣ ವರ್ಗಾಯಿಸಿದರೆ ಏನು ಮಾಡಬೇಕು?. ನಮ್ಮ ಹಣವನ್ನು ವಾಪಸ್ ಪಡೆಯುವುದು ಹೇಗೆ?. ಈ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.
ನೀವು ತಪ್ಪಾಗಿ ಬೇರೆಯವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಈ ಕುರಿತು ನಿಮ್ಮ ಬ್ಯಾಂಕ್ ಗೆ ಮಾಹಿತಿ ನೀಡಿ. ಕಸ್ಟಮರ್ ಕೇರ್ ಗೆ ಕರೆ ಮಾಡಿ ಗ್ರಾಹಕ ಪ್ರತಿನಿಧಿಗೆ ಸಂಪೂರ್ಣ ಮಾಹಿತಿ ನೀಡಿ. ಒಂದು ವೇಳೆ ಬ್ಯಾಂಕ್ ನಿಮಗೆ ಇ-ಮೇಲ್ ಮೂಲಕ ಎಲ್ಲ ಮಾಹಿತಿ ನೀಡುವಂತೆ ಕೇಳಿದರೆ, ಇ-ಮೇಲ್ ನಲ್ಲಿ ನೀವು ನಿಮ್ಮ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಿ.
ಈ ಮಾಹಿತಿಯಲ್ಲಿ ವ್ಯವಹಾರದ ದಿನಾಂಕ ಹಾಗೂ ಸಮಯ ಉಲ್ಲೇಖಿಸಿ. ಇದರೊಂದಿಗೆ ನಿಮ್ಮ ಖಾತೆ ಸಂಖ್ಯೆ ಹಾಗೂ ತಪ್ಪಾಗಿ ಹಣ ವರ್ಗಾವಣೆಗೊಂಡ ಖಾತೆ ಸಂಖ್ಯೆಯ ಕುರಿತು ಕೂಡ ಬರೆಯಿರಿ.
ಒಂದು ವೇಳೆ ನೀವು ಹಣ ವರ್ಗಾವಣೆ ಮಾಡಿದ ಖಾತೆ ಸಂಖ್ಯೆಯೇ ತಪ್ಪಾಗಿದ್ದರೆ ಅಥವಾ IFSC ಕೋಡ್ ತಪ್ಪಾಗಿದ್ದರೆ, ನೀವು ವರ್ಗಾವಣೆ ಮಾಡಿರುವ ಹಣ ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಬರಲಿದೆ. ಅಥವಾ ಹೀಗೆ ನಡೆಯದಿದ್ದಲ್ಲಿ ಬ್ಯಾಂಕ್ ಗೆ ಭೇಟಿ ನೀಡಿ, ಮ್ಯಾನೇಜರ್ ಜತೆ ಭೇಟಿ ಮಾಡಿ. ಅವರಿಗೆ ನೀವು ನಡೆಸಿರುವ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ. ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.
ಒಂದು ವೇಳೆ ನಿಮ್ಮದೇ ಬ್ಯಾಂಕ್ ನ ಬೇರೆ ಖಾತೆಗೆ ನೀವು ಹಣ ವರ್ಗಾವಣೆ ಮಾಡಿದ್ದರೆ, ನಿಮ್ಮ ಖಾತೆಗೆ ಹಣ ವಾಪಸ್ ಬರುವುದು ಸ್ವಲ್ಪ ಸುಲಭವಾಗಲಿದೆ.
ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಗೊಂಡಿದ್ದರೆ ಏನು ಮಾಡಬೇಕು?
ಹಣ ತಪ್ಪಾಗಿ ಮತ್ತೊಂದು ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದರೆ, ಹಣವನ್ನು ಹಿಂಪಡೆಯಲು ಹೆಚ್ಚು ಸಮಯ ಹಿಡಿಯುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು 2 ತಿಂಗಳವರೆಗೆ ಕಾಲಾವಕಾಶ ತೆಗೆದುಕೊಳ್ಳಬಹುದು. ನಿಮ್ಮ ಬ್ಯಾಂಕ್’ನಿಂದ ಯಾವ ಹಣವನ್ನು, ಯಾವ ನಗರದ ಯಾವ ಶಾಖೆಗೆ ವರ್ಗಾಯಿಸಲಾಗಿದೆ ಎಂಬುದನ್ನು ನೀವು ಕಂಡುಹಿಡಿಯಬಹುದು. ಆ ಶಾಖೆಯವರೊಂದಿಗೆ ಮಾತನಾಡಿ ನಿಮ್ಮ ಹಣವನ್ನು ಮರಳಿ ಪಡೆಯಲು ನೀವು ಸಹ ಪ್ರಯತ್ನಿಸಬಹುದು.
ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸಿದ ಸಂದರ್ಭದಲ್ಲಿ ನಿಮಗೆ ಬ್ಯಾಂಕ್ ಸಂದೇಶವೊಂದು ಬರುತ್ತದೆ. ಆ ಸಂದೇಶದಲ್ಲಿಯೂ ಕೂಡ ಒಂದು ವೇಳೆ ತಪ್ಪು ವ್ಯವಹಾರ ನಡೆದಿದ್ದರೆ, ಕೆಳಗೆ ನೀಡಲಾದ ಸಂಖ್ಯೆಗೆ ಸಂದೇಶ ಕಳುಹಿಸುವಂತೆ ಸೂಚಿಸಲಾಗಿರುತ್ತದೆ. ಈ ಕುರಿತು ನಿರ್ದೇಶನಗಳನ್ನು ಜಾರಿಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ತಪ್ಪು ವ್ಯವಹಾರ ನಡೆದ ಸಂದರ್ಭಗಳಲ್ಲಿ ಸಂಬಂಧಪಟ್ಟ ಬ್ಯಾಂಕ್ ಕೂಡಲೇ ಕ್ರಮ ಕೈಗೊಳ್ಳಬೇಕು. ಏಕೆಂದರೆ, ತಪ್ಪಾದ ಖಾತೆಯಿಂದ ಸರಿಯಾದ ಖಾತೆಗೆ ಹಣ ವರ್ಗಾವಣೆ ಮಾಡಿಕೊಡುವುದು ಬ್ಯಾಂಕ್ ನ ಜವಾಬ್ದಾರಿಯಾಗಿದೆ.