ದೇಶದಲ್ಲಿ ಡಿಜಿಟಲ್ ರೂಪಾಯಿ ಬಳಕೆ ಆರಂಭ – ವರ್ಚುವಲ್ ಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

ನ್ಯೂಸ್ ಆ್ಯರೋ : ಭಾರತದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಳಕೆಯನ್ನು ಕಳೆದ ಮಂಗಳವಾರ ಆರಂಭಿಸಲಾಗಿದೆ. ಇದೀಗ ಪ್ರಾರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್, ಬಾಂಡ್ ವಹಿವಾಟುಗಳಲ್ಲಿ ಈ ವರ್ಚುವಲ‌್ ಕರೆನ್ಸಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಸ್‌ಬಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಈ 9 ಹಣಕಾಸು ಸಂಸ್ಥೆಗಳು ಸರ್ಕಾರಿ ಬಾಂಡುಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್ ಕರೆನ್ಸಿಯನ್ನು ವಿತರಿಸುವ ಮಾನ್ಯತೆ ಪಡೆದುಕೊಂಡಿವೆ.
ಪ್ರಸ್ತುತ ಸಗಟು ವಲಯದಲ್ಲಿ ಮಾತ್ರ ಇವುಗಳನ್ನು ಬಳಸಲಾಗುತ್ತದೆ. ಅಂದರೆ, ಸರ್ಕಾರಿ ಬಾಂಡುಗಳಲ್ಲಿನ ಸೆಕೆಂಡರಿ ಮಾರ್ಕೆಟ್ ವಹಿವಾಟುಗಳ ಪಾವತಿಗೆ ಇದನ್ನು ಉಪಯೋಗಿಸಲಾಗುತ್ತದೆ. ಚಿಲ್ಲರೆ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಯಿಗಳ ಮೊದಲ ಪ್ರಾಯೋಗಿಕ ಬಳಕೆಯು ಒಂದು ತಿಂಗಳೊಳಗೆ ಆಯ್ದ ಪ್ರದೇಶಗಳಲ್ಲಿ ಆರಂಭವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಪ್ರಾಯೋಗಿಕ ಬಳಕೆಯಲ್ಲಿ ಸಿಗುವ ಅನುಭವ ಆಧರಿಸಿ ಇತರ ಸಗಟು ವಹಿವಾಟುಗಳಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಇರುವವರ ನಡುವಿನ ಪಾವತಿಗಳಲ್ಲಿ ಇದನ್ನು ಬಳಸಲು ಆದ್ಯತೆ ನೀಡಲಾಗುತ್ತದೆ.
ಈಚೆಗೆ ಸಿದ್ಧಪಡಿಸಿರುವ ಪರಿಕಲ್ಪನಾ ಟಿಪ್ಪಣಿಯಲ್ಲಿ ಆರ್‌ಬಿಐ, ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಸೃಷ್ಟಿಸುವುದು ಚಾಲ್ತಿಯಲ್ಲಿ ಇರುವ ಕರೆನ್ಸಿಗೆ ಪೂರಕವೇ ವಿನಾ, ಪರ್ಯಾಯ ಅಲ್ಲ ಎಂದು ಹೇಳಿದೆ. ಬಳಕೆದಾರರಿಗೆ ಹೆಚ್ಚುವರಿ ಪಾವತಿ ವ್ಯವಸ್ಥೆಯೊಂದನ್ನು ಇದು ಕಲ್ಪಿಸುತ್ತದೆ. ಈಗ ಇರುವ ಪಾವತಿ ವ್ಯವಸ್ಥೆಗಳನ್ನು ತೆಗೆದುಹಾಕುವುದಿಲ್ಲ ಎಂದು ಕೂಡ ಹೇಳಿದೆ.
ಈ ವರ್ಷದ ಫೆಬ್ರುವರಿ 1ರಂದು ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಿಬಿಡಿಸಿ ಚಲಾವಣೆಗೆ ತರುವ ಘೋಷಣೆ ಮಾಡಿತ್ತು. ಜಾಗತಿಕವಾಗಿ 60ಕ್ಕೂ ಹೆಚ್ಚು ಕೇಂದ್ರೀಯ ಬ್ಯಾಂಕ್‌ಗಳು ಸಿಬಿಡಿಸಿ ಬಗ್ಗೆ ಆಸಕ್ತಿ ತೋರಿವೆ. ಕೆಲವು ದೇಶಗಳಲ್ಲಿ ಈ ಕರೆನ್ಸಿಯನ್ನು ಚಲಾವಣೆಗೆ ತರುವ ಪ್ರಾಯೋಗಿಕ ಕಾರ್ಯ ನಡೆದಿದೆ.
ಪ್ರಸ್ತುತ ಹಣವು ಕರೆನ್ಸಿ ನೋಟುಗಳ ರೂಪದಲ್ಲಿ ಮತ್ತು ಡಿಜಿಟಲ್ ರೂಪದಲ್ಲಿದೆ. ಡಿಜಿಟಲ್ ರೂಪಾಯಿಗೆ ಕರೆನ್ಸಿ ನೋಟಿನಷ್ಟೇ ಮೌಲ್ಯವಿದೆ. ಇದು ಕೂಡ ಆರ್‌ಬಿಐ ಅಧಿಕಾರದ ಅಡಿಯಲ್ಲಿ ಬರುತ್ತದೆ. ಸದ್ಯ ಕೆಲವು ವಹಿವಾಟುಗಳಲ್ಲಿ ಪ್ರಾಯೋಗಿಕ ಆಧಾರದಲ್ಲಿ ಡಿಜಿಟಲ್ ರೂಪಾಯಿ ಆರಂಭಿಸಲಾಗಿದ್ದು, ಕ್ರಮೇಣ ಇನ್ನಷ್ಟು ಕ್ಷೇತ್ರಕ್ಕೆ ವಿಸ್ತರಿಸುವ ಸಾಧ್ಯತೆ ಇದೆ.