ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ ಬಡ್ಡಿದರ ಎಷ್ಟು? – ಈ ಯೋಜನೆಗೆ ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

ನ್ಯೂಸ್ ಆ್ಯರೋ : ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿ ಶೇ.6.8 ರಷ್ಟು ಬಡ್ಡಿದರ ನಿಗದಿಯಾಗಿದ್ದು, 5 ವರ್ಷದ ಉಳಿತಾಯ ಯೋಜನೆ. ನಿಮ್ಮ ಹಣವು ಕೇವಲ 10 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ. ಈ ಯೋಜನೆಯಲ್ಲಿ ವ್ಯಕ್ತಿಗಳಿಗೆ ಉಳಿತಾಯದ ಜತೆಗೆ ತೆರಿಗೆ ವಿನಾಯಿತಿ ಸೌಲಭ್ಯವೂ ಸಿಗುತ್ತದೆ. ಅಲ್ಲದೆ ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ ಅಪಾಯ (ರಿಸ್ಕ್) ಹೊಂದಿದ್ದು, ಸ್ಥಿರ ಆದಾಯ ನೀಡುತ್ತದೆ. NSC ಅನ್ನು ಒಂದು ನಿರ್ದಿಷ್ಟ ಅವಧಿಯ ಹೂಡಿಕೆ ಯೋಜನೆಯಾಗಿ ವರ್ಗೀಕರಿಸಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF), ಕಿಸಾನ್ ವಿಕಾಸ್ ಪತ್ರ (ಕೆವಿಪಿ) ದಂತೆ ಇದೂ ಕೂಡ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ವ್ಯಕ್ತಿಗಳಿಗೆ ಉಳಿತಾಯ ಮತ್ತು ಹೂಡಿಕೆಯ ಅಭ್ಯಾಸ ಬೆಳೆಸಲು ಸಹಾಯಕವಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು? ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಪ್ರಯೋಜನಗಳು? ಅದರ ತೆರಿಗೆ ನೀತಿ ಇತ್ಯಾದಿ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಈ ಯೋಜನೆಯನ್ನು ಸ್ವಾತಂತ್ರ್ಯದ ನಂತರ ಪ್ರಾರಂಭಿಸಲಾಯಿತು. ಜನರಿಂದ ಹಣ ಸಂಗ್ರಹಿಸಿ ದೇಶದ ಅಭಿವೃದ್ಧಿಗೆ ಬಳಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯ ಮೂಲಕ ಸರ್ಕಾರವು ಸಂಪೂರ್ಣ ಹೂಡಿಕೆಯನ್ನು ಇಡೀ ರಾಷ್ಟ್ರದ ಪ್ರಗತಿಯತ್ತ ಹರಿಸುವ ಗುರಿ ಹೊಂದಿದೆ. ಎನ್‌ಎಸ್‌ಸಿಯಲ್ಲಿ ಹೂಡಿಕೆ ಅವಧಿಗೆ ಸಂಬಂಧಿಸಿದಂತೆ ವ್ಯಕ್ತಿಗಳಿಗೆ ಎರಡು ಆಯ್ಕೆಗಳಿವೆ, ಅಂದರೆ 5 ವರ್ಷಗಳು ಮತ್ತು 10 ವರ್ಷಗಳು. ಆದಾಗ್ಯೂ, 10 ವರ್ಷಗಳ ಆಯ್ಕೆಯನ್ನು ನಿಲ್ಲಿಸಲಾಗಿದೆ. ವ್ಯಕ್ತಿಗಳು ಅಂಚೆ ಕಛೇರಿಗಳ ಮೂಲಕ NSC ಅನ್ನು ಖರೀದಿಸಬಹುದು.
ಬಡ್ಡಿದರ ಎಷ್ಟು?
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ 2020ರ ಏಪ್ರಿಲ್ 1ರಿಂದ ವಾರ್ಷಿಕ ಶೇ.6.8ರ ಬಡ್ಡಿದರ ನಿಗದಿಮಾಡಲಾಗಿದೆ. ಈ ಬಡ್ಡಿದರ ಕಾಲಾಕಾಲಕ್ಕೆ ಬದಲಾಗುವುದಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿಯು NSCಯಲ್ಲಿ ಹೂಡಿಕೆ ಮಾಡಿದ ಸಂದರ್ಭದಲ್ಲಿ ಬಡ್ಡಿ ದರ ವಾರ್ಷಿಕ ಶೇ.6.8ರಷ್ಟಿದ್ದರೆ, ಅವರ ಹೂಡಿಕೆ ಮೆಚ್ಯುರಿಟಿ ಆಗುವವರೆಗೆ ಅದೇ ಬಡ್ಡಿದರ ಇರುತ್ತದೆ. ಹಾಗಾಗಿ ಭವಿಷ್ಯದಲ್ಲಿ ಬಡ್ಡಿದರದಲ್ಲಿ ಬದಲಾವಣೆಯಾದರೂ, ಹೂಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.
ಅರ್ಹತೆಗಳೇನು..?
ಯಾವುದೇ ಭಾರತೀಯ ಪ್ರಜೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಲು ಅನುಮತಿಸಲಾಗಿದೆ. ಆದರೆ, ಟ್ರಸ್ಟ್‌ಗಳು ಮತ್ತು ಹಿಂದೂ ಅವಿಭಜಿತ ಕುಟುಂಬ (HUFs) ಹೂಡಿಕೆಗೆ ಅವಕಾಶವಿರಲಿಲ್ಲ. ಅನಿವಾಸಿ ಭಾರತೀಯ ಪ್ರಜೆಗಳು ಕೂಡ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ. ವ್ಯಕ್ತಿಗಳು ಯಾವುದಾದರೂ ಅಂಚೆ ಕಛೇರಿ ಶಾಖೆಗೆ ಭೇಟಿ ನೀಡುವ ಮೂಲಕ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಖರೀದಿ ಮಾಡಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಯಾವುದೇ ಭಾರತೀಯ ಅಂಚೆ ಕಚೇರಿಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಖರೀದಿಸಬಹುದು. ಅಂಚೆ ಕಚೇರಿಗೆ ತೆರಳಿ ಎನ್‌ಎಸ್‌ಸಿ ಅರ್ಜಿ ಪಡೆಯಿರಿ. ಅದರಲ್ಲಿ ಖಾತೆದಾರರ ಹೆಸರು, ಪಾವತಿ ಮೋಡ್, ಖಾತೆಯ ಪ್ರಕಾರ ಮತ್ತು ಮುಂತಾದ ವಿವರಗಳನ್ನು ಭರ್ತಿ ಮಾಡಿ. ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ ವ್ಯಕ್ತಿಯು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ಮತ್ತು ಛಾಯಾಚಿತ್ರ ಮೊದಲಾದ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ನಂತರ, ನಿಗದಿದ ಮೊತ್ತದ ಹಣ ಪಾವತಿಸಬೇಕು. ಹಣ ಪಾವತಿಯಾದ ನಂತರ ಪೋಸ್ಟ್ ಆಫೀಸ್ ನಮೂದಿಸಿದ ಮೊತ್ತದ ಆಧಾರದ ಮೇಲೆ ಹೂಡಿಕೆ ಮಾಡಿದ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ.