1. Home
  2. Business
  3. News
  4. ಹೊಸ ಉದ್ಯಮಕ್ಕೆ ಕೈ ಹಾಕಿದ ಮಹೇಂದ್ರ ಸಿಂಗ್ ಧೋನಿ – ಹಣಗಳಿಕೆ ವಿಚಾರದಲ್ಲೂ ಧೋನಿ ಮಾಸ್ಟರ್ ಮೈಂಡ್..!!

ಹೊಸ ಉದ್ಯಮಕ್ಕೆ ಕೈ ಹಾಕಿದ ಮಹೇಂದ್ರ ಸಿಂಗ್ ಧೋನಿ – ಹಣಗಳಿಕೆ ವಿಚಾರದಲ್ಲೂ ಧೋನಿ ಮಾಸ್ಟರ್ ಮೈಂಡ್..!!

ಹೊಸ ಉದ್ಯಮಕ್ಕೆ ಕೈ ಹಾಕಿದ ಮಹೇಂದ್ರ ಸಿಂಗ್ ಧೋನಿ – ಹಣಗಳಿಕೆ ವಿಚಾರದಲ್ಲೂ ಧೋನಿ ಮಾಸ್ಟರ್ ಮೈಂಡ್..!!
0

ನ್ಯೂಸ್ ಆ್ಯರೋ : ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ಲೋಕಕ್ಕೆ ಹೊಸ ಆಯಾಮ ನೀಡಿದ ಆಟಗಾರ. ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಅಂದ್ರೆ ಅದು ಮಹೇಂದ್ರ ಸಿಂಗ್ ಧೋನಿ.

Image credit : Finology.in

ಕೋಟಿಗಟ್ಟಲೇ ಭಾರತೀಯರು ಮರೆಯಲಾಗದ ಆಟಗಾರ ಮಹೇಂದ್ರ ಸಿಂಗ್​ ಧೋನಿ. ಇವರ ಬಗ್ಗೆ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಸ್ತುತ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ​ಗೆ ವಿದಾಯ ಹೇಳಿ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇಷ್ಟೇ ಅಲ್ಲದೇ ಕ್ರಿಕೆಟ್ ಹೊರತಾಗಿಯೂ ಧೋನಿ ಹಲವು ಮಾರ್ಗಗಳಲ್ಲಿ ಆದಾಯ ಗಳಿಸುತ್ತಿದ್ದಾರೆ. ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರೂ ಅವರ ಸಂಪತ್ತು ಪ್ರತಿ ವರ್ಷ ಬೆಳೆಯುತ್ತಲೇ ಇದೆ. ಬ್ರ್ಯಾಂಡ್​ ಎಂಡಾರ್ಸ್​ಮೆಂಟ್​ಗಳು ಹಾಗೂ ವ್ಯಾಪಾರ ಎರಡೂ ಧೋನಿಯ ಆಸ್ತಿಯ ಮೌಲವ್ಯವನ್ನು ಹೆಚ್ಚಿಸುತ್ತಿದೆ.

ಹೌದು.. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಕೃಷಿ ಆಧಾರಿತ, ಜವಳಿ, ಮದ್ಯ ಮತ್ತು ಮೋಟಾರು ಕಾರು ಕ್ಷೇತ್ರಗಳಲ್ಲಿ ವ್ಯಾಪಕ ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಜಾರ್ಖಂಡ್‌ನ ಸಣ್ಣ ಪಟ್ಟಣವಾದ ರಾಂಚಿಯಿಂದ ಬಂದಿರುವ ಧೋನಿ ಪ್ರಸ್ತುತ ದೇಶಾದ್ಯಂತ ಅನೇಕ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಸ್ಪೋರ್ಟ್ಸ್ ಫಿಟ್ ವರ್ಲ್ಡ್, ಅಕೌಂಟ್ ಬುಕ್, 7ಇಂಕ್ ಬ್ರೂಸ್, ಕಾರ್ಸ್ 24, ಹೋಮ್ ಲೋನ್, ಸ್ಪೋರ್ಟ್ಸ್ ಫಿಟ್, ಹೋಟೆಲ್ ಮಾಹಿ ರೆಸಿಡೆನ್ಸಿ ಸೇರಿ ಸಾಕಷ್ಟು ಕ್ಷೇತ್ರಗಳಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ. ಧೋನಿ ವಿವಿಧ ಕ್ರೀಡಾ ಲೀಗ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಚೆನ್ನೈ ಫುಟ್ಬಾಲ್ ಕ್ಲಬ್, ಹಾಕಿ ಕ್ಲಬ್ ರಾಂಚಿ ರೇಸ್ ಮತ್ತು ಮಹಿ ರೇಸಿಂಗ್ ಟೀಮ್ ಇಂಡಿಯಾದಲ್ಲಿ ಹೂಡಿಕೆ ಮಾಡಿದ್ದಾರೆ.

ಇದೀಗ ಕ್ಯಾಪ್ಟನ್ ಕೂಲ್ ಸ್ಟಾರ್ಟಪ್‌ ಗಳತ್ತ ಚಿತ್ತ ನೆಟ್ಟಿದ್ದು, ಸಸ್ಯಾಧಾರಿತ ಚಿಕನ್ ತಯಾರಿಸುವ ‘ಶಾಕಾಹ್ಯಾರಿ’ ಎಂಬ ಸ್ಟಾರ್ಟಪ್‌ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಸಸ್ಯ ಆಧಾರಿತ ಪ್ರೊಟೀನ್ ತಯಾರಿಸುವ ಸ್ಟಾರ್ಟಪ್ ಕಂಪನಿ ‘ಶಾಕಾಹ್ಯಾರಿ’ ಯಲ್ಲಿ ಧೋನಿ ಹೂಡಿಕೆ ಮಾಡಿದ್ದು, ಸ್ವತ: ಕಂಪನಿಯೇ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದೆ. ಬೆಟರ್ ಬೈಟ್ ವೆಂಚರ್ಸ್, ಬ್ಲೂ ಹಾರಿಜಾನ್ ಮತ್ತು ಪ್ಯಾಂಥೆರಾ ಪೀಕ್ ವೆಂಚರ್ಸ್ ನೇತೃತ್ವದ ಆರಂಭಿಕ ಬಂಡವಾಳ ಸುತ್ತಿನಲ್ಲಿ $2 ಮಿಲಿಯನ್ ಡಾಲರ್‌ ಪಡೆದಿರುವುದಾಗಿ ಸಸ್ಯ-ಆಧಾರಿತ ಚಿಕನ್-ಮೇಕಿಂಗ್ ಸ್ಟಾರ್ಟ್ಅಪ್ ಹೇಳಿದೆ.

ಈ ಕಂಪನಿಯು ಎಂ.ಎಸ್‌. ಧೋನಿಯ ಹೊರತಾಗಿ, ಪ್ರಸಿದ್ಧ ಬಾಣಸಿಗ ಮನು ಚಂದ್ರರಂತಹ ಇತರ ಹೂಡಿಕೆದಾರರನ್ನು ಸಹ ಹೊಂದಿದೆ. ಈ ಬಗ್ಗೆ ಮಾತನಾಡಿದ ಧೋನಿ ಅವರು ನಾನು ಚಿಕನ್ ಅನ್ನು ಇಷ್ಟಪಡುತ್ತೇನೆ. ಆದರೆ, ಈಗ ಸಮತೋಲಿತ ಆಹಾರ ಬಯಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ‘ಶಾಕಾಹ್ಯಾರಿಯ ಉತ್ಪನ್ನಗಳು ವ್ಯಾಪಕ ಶ್ರೇಣಿಯಲ್ಲಿ ಬಿಡುಗಡೆ ಆಗಲಿವೆ. ಇವು ಸಾಂಪ್ರದಾಯಿಕ ಮಾಂಸ ಭಕ್ಷ್ಯಗಳಿಗಿಂತ ಆರೋಗ್ಯಕರ ಅನುಭವ ನೀಡುತ್ತವೆ’ ಎಂದು ತಿಳಿಸಿದ್ದಾರೆ.

ಇದರ ಹೊರತಾಗಿ ಕೆಲ ದಿನಗಳ ಹಿಂದೆಯಷ್ಟೇ ಧೋನಿ ‘ಮೇಡ್​ ಇನ್​ ಇಂಡಿಯಾ ಕ್ಯಾಮರಾ ಡ್ರೋನ್’ ಅನ್ನು ಬಿಡುಗಡೆ ಮಾಡಿದ್ದರು. ಆ ಡ್ರೋನ್‌ಗೆ ದ್ರೋಣಿ ಎಂದು ಹೆಸರಿಡಲಾಗಿದೆ. ಈ ಡ್ರೋನ್ ಅನ್ನು ಗರುಡಾ ಏರೋಸ್ಪೇಸ್ ಕಂಪನಿ ತಯಾರಿಸಿದ್ದು, ಪ್ರಮುಖ ಡ್ರೋನ್ ತಯಾರಿಕಾ ಕಂಪನಿ ಗರುಡಾ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ನಲ್ಲಿಯೂ ಧೋನಿ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ಧೋನಿ ಈ ಡ್ರೋನ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದು, ದೇಶದ 26 ನಗರಗಳಲ್ಲಿ 300 ಡ್ರೋನ್‌ಗಳು ಮತ್ತು 500 ಪೈಲಟ್‌ಗಳು ಈ ಕಂಪನಿಗಾಗಿ ಕೆಲಸ ಮಾಡುತ್ತಿದ್ದಾರೆ.

ಅಲ್ಲದೆ, ಈ ಡ್ರೋನ್ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಉಪಯುಕ್ತವಾಗಲಿದ್ದು, ಔಷಧ ಸಿಂಪರಣೆ, ಸೌರ ಫಲಕ ಸ್ವಚ್ಛಗೊಳಿಸುವಿಕೆ, ವಿತರಣಾ ಸೇವೆಗಳು, ಪೈಪ್‌ಲೈನ್ ತಪಾಸಣೆ ಮತ್ತು ಸಮೀಕ್ಷೆಯಂತಹ ಕ್ಷೇತ್ರಗಳಲ್ಲಿ ಇದು ಉಪಯುಕ್ತವಾಗಿರುತ್ತದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..