ಕಾಲೇಜ್ ಗೆ ಗುಡ್’ಬೈ, ಕಿರಿಯ ವಯಸ್ಸಲ್ಲೇ ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ ಯುವತಿ – ಮೂರೇ ವರ್ಷದಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ ಸಾಹಸಿ

ನ್ಯೂಸ್ ಆ್ಯರೋ : ವಿದೇಶಕ್ಕೆ ಹೋಗಿ ಎಂಬಿಎ ಕಲಿಯಬೇಕಾದ ಯುವತಿ ಹೋಟೆಲ್ ಉದ್ಯಮಕ್ಕಿಳಿದು ಇಂದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಮೂರೇ ಮೂರು ವರ್ಷದಲ್ಲಿ ಜಗತ್ತು ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಹೋಟೆಲ್ ಕ್ಷೇತ್ರಕ್ಕೆ ಬಂದ ಯುವತಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಮೂಲದ ಹರಿಣಿ ರೆಡ್ಡಿ ಯಶೋಗಾಥೆಯಿದು. ತಂದೆ ಕೃಷ್ಣಾ ರೆಡ್ಡಿ ಚೆನ್ನೈ ಹಾಗೂ ಗುಂಟೂರಿನಲ್ಲಿ ಎಲೆಕ್ಟ್ರಾನಿಕ್ಸ್ ಶೋ ರೂಂ ನಡೆಸುತ್ತಿದ್ದರು. ತಾಯಿ ಗೃಹಿಣಿ. ಬಿಬಿಎಂ ಪದವೀಧರೆಯಾದ ಮರೆಡ್ಡಿ ಹರಿಣಿ ಕೆನಡಾಕ್ಕೆ ಹೋಗಿ ಎಂಬಿಎ ಕಲಿಯಲಿ ಎಂದು ಪೋಷಕರು ಬಯಸಿದ್ದರು. ಆದ್ರೆ ಉದ್ಯಮಿಯಾದ ತಂದೆಯನ್ನು ನೋಡಿ ಬೆಳೆದಿದ್ದ ಹರಿಣಿಗೆ ನಾನು ತಂದೆಯಂತೆಯೇ ಉದ್ಯಮ ಕ್ಷೇತ್ರದಲ್ಲಿ ಸಾಧಿಸಬೇಕು ಎನ್ನುವ ಕನಸಿತ್ತು. ಹೀಗಾಗಿ ತಂದೆ ಶಿಕ್ಷಣಕ್ಕಾಗಿ ಉಳಿಸಿದ ಹಣವನ್ನೇ ಹೂಡಿಕೆ ಮಾಡಿ ಹೋಟೆಲ್ ಉದ್ಯಮ ಪ್ರಾರಂಭಿಸಲು ನಿರ್ಧರಿಸಿದರು.
ತಂದೆ ಕೃಷ್ಣಾ ರೆಡ್ಡಿ ಫ್ಯಾಷನ್ ಇಂಡಸ್ಟ್ರಿ ವ್ಯವಹಾರದ ಸಲಹೆ ನೀಡಿದ್ರು. ಆದ್ರೆ ನನಗೆ ಚಿಕ್ಕಂದಿನಿಂದಲೂ ಹೊಸ ತಿಂಡಿಗಳನ್ನು ತಯಾರಿಸುವುದು ಮತ್ತು ಬಡಿಸುವುದು ಅಂದ್ರೆ ಇಷ್ಟ. ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ ಹೊಸ ಹೊಸ ರೆಸಿಪಿಗಳನ್ನು ಕಲಿಯುತ್ತಿದ್ದೆ. ಹೀಗಾಗಿ ಹೋಟೆಲ್ ಉದ್ಯಮವೇ ಬೆಸ್ಟ್ ಅನಿಸಿತು. ನೆಂಟರಿಷ್ಟರು ಬೇಡ ಎಂದರು. ಹುಡುಗಗರಿಗೆ ಕಷ್ಟ, ಅಂಥದ್ರಲ್ಲಿ ಹೆಣ್ಣು ಮಕ್ಕಳು ಹೋಟೆಲ್ ಉದ್ಯಮ ನಡೆಸುವುದು ಸುಲಭದ ಮಾತಲ್ಲ ಅಂದ್ರು. ಆದ್ರೆ ನನಗೆ ನಂಬಿಕೆಯಿತ್ತು. ಹೀಗಾಗಿ ಹೊಸಪೇಟೆಯ ಪ್ರಸಿದ್ಧ ಹೋಟೆಲ್ ಎಂಡಿ ಮನವೊಲಿಸಿ ಆರು ತಿಂಗಳ ಪ್ರಾಜೆಕ್ಟ್ ವರ್ಕ್ ಮಾಡಿದೆ. ನನ್ನ ಸಾಮರ್ಥ್ಯ ಸಾಬೀತುಪಡಿಸಲು ನಿರ್ಧರಿಸಿದೆ ಅಂತ ಹರಿಣಿ ರೆಡ್ಡಿಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಾಕಷ್ಟು ರೆಸ್ಟೋರೆಂಟ್’ಗಳಿವೆ. ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಎಲ್ಲಾ ರೀತಿಯ ಫುಡ್’ಗಳು ಇಲ್ಲಿ ಸಿಗುತ್ತವೆ. ಅಂತದ್ರಲ್ಲಿ ಆಂಧ್ರದ ಮತ್ತೊಂದು ರೆಸ್ಟೋರೆಂಟ್ ಹಾಕಿ ಈ ಮಟ್ಟಿಗೆ ಲಾಭ ಗಳಿಸುವುದು ಸವಾಲೇ ಸರಿ. ಆದ್ರೆ ಅದಕ್ಕೆಲ್ಲಾ ಪ್ರಿಪೇರ್ ಆಗಿದ್ದ ಮರೆಡ್ಡಿ ಹರಿಣಿ ಉಳವಚಾರು ಬಿರಿಯಾನಿ, ಗುಂಟೂರು ಗೊಂಗೂರ, ಅವಚಯ ಬಿರಿಯಾನಿ, ಪಲ್ನಾಡು ನಾಟುಕೋಡಿ ಬಿರಿಯಾನಿ ಸೇರಿದಂತೆ ಆಂಧ್ರದ ಮನೆ ಅಡುಗೆಯ ಮೆನು ತಯಾರಿಸಿದರು.
ವಿದ್ಯಾರ್ಥಿಗಳು ಮತ್ತು ಸಣ್ಣ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಅನ್ ಲಿಮಿಟೆಡ್ ಬಿರಿಯಾನಿ ಮತ್ತು ಕೆಲವು ಚಿಕನ್ ಸ್ಟಾರ್ಟರ್‌ಗಳನ್ನು ಕೇವಲ 299 ರೂ.ಗೆ ನೀಡಲು ಪ್ರಾರಂಭಿಸಿದರು. ಅಡುಗೆಗೆ ಬಳಸುವ ಮಸಾಲೆಗಳನ್ನು ಮನೆಯಲ್ಲಿಯಲ್ಲಿಯೇ ತಯಾರಿಸಿದರು. ಇದು ವರ್ಕೌಟ್ ಆಗಿ ಲಾಭ ಗಳಿಸತೊಡಗಿದರು. ಕೊರೊನಾ ಸಮಯದಲ್ಲಿ 20 ವಿವಿಧ ಖಾದ್ಯಗಳನ್ನು ಕೇವಲ ರೂ. 349ಕ್ಕೆ ನೀಡಿದ್ದು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿತು.

ಕಲ್ಯಾಣನಗರದಲ್ಲಿ ನೂರಾರು ಹೋಟೆಲ್‌ಗಳಿದ್ದರೂ ಕೇವಲ ಮೂರು ವರ್ಷದಲ್ಲಿ ವಾರ್ಷಿಕ 9 ಕೋಟಿ ರೂ. ವ್ಯವಹಾರ ನಡೆಸುವಷ್ಟರ ಮಟ್ಟಿಗೆ ಹರಿಣಿಗೆ ಗೆಲುವು ಸಿಕ್ಕಿದೆ. ಹೋಟೆಲಿನ ಆಸನಗಳ ಸಾಮರ್ಥ್ಯವನ್ನು 60ರಿಂದ 200ಕ್ಕೆ ಹೆಚ್ಚಿಸಿದ್ದಾರೆ. ನಗರದಲ್ಲಿ ಇನ್ನೂ ಎರಡು ಮಳಿಗೆಗಳನ್ನು ತೆರೆದಿದ್ದಾರೆ. ಹರಿಣಿ ಸುಮಾರು 2 ವರ್ಷಗಳ ಕಾಲ ಪ್ರತಿದಿನ 12-14 ಗಂಟೆಗಳ ಕೆಲಸ ಮಾಡಿದ್ದಾರಂತೆ. ಸಾಮಾನು ತರುವುದು, ಅಡುಗೆಯ ಮೇಲ್ವಿಚಾರಣೆ, ಫ್ರಂಟ್ ಆಫೀಸ್ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಸದ್ಯ ನಮ್ಮ ಕಂಪನಿಯಲ್ಲಿ 100 ಜನರಿಗೆ ಉದ್ಯೋಗ ನೀಡಲಾಗಿದೆ. ಐದು ವರ್ಷಗಳಲ್ಲಿ ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ನನ್ನ ತಂದೆ, ತಾಯಿ, ತಮ್ಮ ಹೋಟೆಲ್ ನಿರ್ವಹಣೆಯಲ್ಲಿ ನನಗೆ ಸಹಾಯ ಮಾಡುತ್ತಿದ್ದಾರೆ ಎಂದು ಯುವ ಉದ್ಯಮಿ ಮರೆಡ್ಡಿ ಹರಿಣಿ ಹೇಳಿಕೊಂಡಿದ್ದಾರೆ.