1. Home
  2. Education
  3. ಗರಿಷ್ಠ 10 ಲಕ್ಷದವರೆಗೆ ಶಿಕ್ಷಣ ಸಾಲ ನೀಡಲಿವೆ ಬ್ಯಾಂಕುಗಳು – ಶೀಘ್ರವೇ ಅಧಿಸೂಚನೆ ಪ್ರಕಟ

ಗರಿಷ್ಠ 10 ಲಕ್ಷದವರೆಗೆ ಶಿಕ್ಷಣ ಸಾಲ ನೀಡಲಿವೆ ಬ್ಯಾಂಕುಗಳು – ಶೀಘ್ರವೇ ಅಧಿಸೂಚನೆ ಪ್ರಕಟ

ಗರಿಷ್ಠ 10 ಲಕ್ಷದವರೆಗೆ ಶಿಕ್ಷಣ ಸಾಲ ನೀಡಲಿವೆ ಬ್ಯಾಂಕುಗಳು – ಶೀಘ್ರವೇ ಅಧಿಸೂಚನೆ ಪ್ರಕಟ
0

ನ್ಯೂಸ್ ಆ್ಯರೋ : ಉತ್ತಮ ಶಿಕ್ಷಣ ಪಡೆದರೆ ಆರ್ಥಿಕ ಸಮಸ್ಯೆ ನೀಗಿಸಬಹುದು. ಹಾಗೆಯೇ ಉನ್ನತ ಮತ್ತು ಆಸಕ್ತ ಶಿಕ್ಷಣ ಪಡೆಯಲು ಅದೇ ಆರ್ಥಿಕ ಸಮಸ್ಯೆ ಎದುರಾಗಲೂಬಹುದು. ನೀವು ಎಸ್‌ಎಸ್‌ಎಲ್‌ಸಿ / ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಭಾರತದಲ್ಲಿನ ಬೆಸ್ಟ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಬಯಸಬಹುದು. ಇಂತಹ ಸಂದರ್ಭದಲ್ಲಿ ಹಣದ ಕೊರತೆ ಎದುರಾಗಬಹುದು.

ಆದರೆ ಇಂದು ಆರ್ಥಿಕ ಆಡಚಣೆಯಿಂದ ಉನ್ನತ ಶಿಕ್ಷಣವನ್ನು ಕೈ ಬಿಡುವಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗಿಲ್ಲ. ಏಕೆಂದ್ರೆ ಹೆತ್ತವರ ಕೈಯಲ್ಲಿ ದುಡ್ಡಿಲ್ಲದಿದ್ರೂ ಬ್ಯಾಂಕಿನಿಂದ ಸಾಲ ಪಡೆದು ಶಿಕ್ಷಣ ಮುಂದುವರಿಸೋ ಅವಕಾಶವಿದೆ.

ಹೌದು, ಬ್ಯಾಂಕುಗಳು ನೀಡುತ್ತಿರೋ ಶೈಕ್ಷಣಿಕ ಸಾಲ ಇಂದು ಅಸಂಖ್ಯಾತ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದು, ಇದೀಗ ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಪ್ರಸ್ತುತ ಇರುವ ಶಿಕ್ಷಣ ಸಾಲದ ಗರಿಷ್ಠ ಮಿತಿಯನ್ನು ಹೆಚ್ಚಿಸಿದ್ದು, 7.5 ಲಕ್ಷ ರೂ. ಗಳಿಂದ 10 ಲಕ್ಷ ರೂ. ಏರಿಕೆ ಆಗಲಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಶಿಕ್ಷಣ ಸಾಲ ಮಂಜೂರಾತಿಯಲ್ಲೇ ನಾನಾ ಸಮಸ್ಯೆಗಳು ಎದುರಾಗುತ್ತಿದ್ದು, ಸಾಲದ ಅರ್ಜಿಗಳ ಪರಿಶೀಲನೆ ಮತ್ತು ಮಂಜೂರಾತಿ ವಿಳಂಬವಾಗುತ್ತಿದೆ. ಸಾಲ ಮಂಜೂರು ಮಾಡದೇ ಅರ್ಜಿ ತಿರಸ್ಕಾರಿಸುತ್ತಿರುವುದರ ಕುರಿತೂ ಅಸಮಾಧನ ವ್ಯಕ್ತವಾಗಿದ್ದು, ಹತ್ತಾರು ದೂರುಗಳು ಕೇಳಿ ಬಂದಿವೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸರ್ಕಾರವು ಸಾಲದ ಖಾತ್ರಿಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದಿದ್ದು, ಈ ಸಮಸ್ಯೆಯನ್ನು ದೂರ ಮಾಡಬಹುದೇ ಎಂಬ ಕುತೂಹಲ ಹುಟ್ಟಿಸಿದೆ.

ಈಗ ಶಿಕ್ಷಣ ಸಾಲದಲ್ಲಿ 7.5 ಲಕ್ಷ ರೂಪಾಯಿ ತನಕದ ಸಾಲಕ್ಕೆ ಮೇಲಾಧಾರ ಅಥವಾ ಖಾತರಿ ನೀಡಬೇಕಾಗಿಲ್ಲ. ಬ್ಯಾಂಕುಗಳು ಈ ಮೊತ್ತದ ಸಾಲ ಮಂಜೂರು ಮಾಡಲು ಯಾವುದೇ ಅಡಮಾನ ಇಡಬೇಕು ಎಂದು ಒತ್ತಾಯಿಸುವಂತಿಲ್ಲ. ಇದಕ್ಕೂ ಹೆಚ್ಚಿನ ಮೊತ್ತದ ಸಾಲ ಪಡೆಯುವುದಕ್ಕೆ ನಿಯಮ ಬಿಗಿಯಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಬ್ಯಾಂಕ್​ಗಳ ಒಕ್ಕೂಟವು ಬ್ಯಾಂಕ್​ಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿದ್ದು, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಮೇಲೆ ಸಾಲ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಶಿಕ್ಷಣ ಸಾಲದ ವಿಮೆಗೆ ಏಕರೂಪ ಶುಲ್ಕ ನಿಗದಿಪಡಿಸುವ ಬಗ್ಗೆ ವರದಿ ನೀಡಲಿ ಎಂಬ ಅಭಿಪ್ರಾಯವೂ ಕೇಳಿ ಬಂದಿದ್ದು, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಹೆಚ್ಚಿನ ಸಾಲದ ಅನುಕೂಲವನ್ನು ದೇಶವ್ಯಾಪಿ ವಿಸ್ತರಿಸುವುದರ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದೆ.

ಇನ್ನೂ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸುವಲ್ಲಿ ಖಾಸಗಿ ಬ್ಯಾಂಕ್​ಗಳು ಮೌನ ವಹಿಸಿದ್ದು, ಶೇ. 90ರಷ್ಟು ಶಿಕ್ಷಣ ಸಾಲವನ್ನು ಸರ್ಕಾರಿ ಬ್ಯಾಂಕ್​ಗಳೇ ನೀಡುತ್ತಿವೆ. ಸರ್ಕಾರಿ ಬ್ಯಾಂಕ್​ಗಳು ವಿತರಿಸಿರುವ ಶಿಕ್ಷಣ ಸಾಲದ ಪೈಕಿ ಶೇ.8 ರಷ್ಟು ಅನುತ್ಪಾದಕ ಆಸ್ತಿಯಾಗಿ ಬದಲಾಗಿದ್ದು, ಬ್ಯಾಂಕಿಂಗ್ ವಲಯದ ಒಟ್ಟು ಅನುತ್ಪಾದಕ ಆಸ್ತಿಯು ಮಾರ್ಚ್ 2022ರ ವೇಳೆಗೆ ಶೇ 6ಕ್ಕಿಂತ ಕಡಿಮೆಯಾಗಿದೆ. ಒಟ್ಟು ಎನ್​ಪಿಎ ಸರಾಸರಿಗಿಂತಲೂ ಶಿಕ್ಷಣ ಸಾಲದ ಎನ್​ಪಿಎ ಸರಾಸರಿ ಹೆಚ್ಚಾಗಿರುವುದರಿಂದ ಬ್ಯಾಂಕ್​ಗಳು ಸಾಲ ನೀಡಲು ಹಿಂದೂ ಮುಂದು ನೋಡುತ್ತಿವೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..