ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಮುಖ ಬದಲಾವಣೆ – ಯೋಜನೆಯ ಬದಲಾದ ನಿಯಮಗಳ ಬಗ್ಗೆ ತಿಳಿಯಲು ಈ ವರದಿ ಓದಿ..

ನ್ಯೂಸ್ ಆ್ಯರೋ : ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಲ್ಲದೇ ಭೇಟಿ ಬಚಾವೊ, ಭೇಟಿ ಪಡಾವೋ ಆಂದೋಲನದ ಮೂಲಕ ಬಹಳಷ್ಟು ಕಾರ್ಯಗಳನ್ನು ಸಹ ಮಾಡಿದೆ. ಹಾಗೆಯೇ ಇದೇ ಆಂದೋಲನದ ಅಡಿಯಲ್ಲಿ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯನ್ನು 2015ರಲ್ಲಿ ಪರಿಚಯಿಸಿದ್ದು, ಇನ್ನು ಭಾರತದ ತೆರಿಗೆ ಕಾಯ್ದೆಯ 80C ಸೆಕ್ಷನ್ ಅಡಿಯಲ್ಲಿ ಬರುವ ಈ ಯೋಜನೆ , ಹೆಣ್ಣು ಮಕ್ಕಳಿಗೆ ಉಳಿತಾಯ ಮಾಡಲು ಸಹಾಯ ಮಾಡುವ ಸಣ್ಣ ಪ್ರಯತ್ನವಾಗಿದೆ.
ಹಾಗೆಯೇ ಈ ಸಣ್ಣ ಉಳಿತಾಯ ಯೋಜನೆಯು ಒಳ್ಳೆಯ ಬಡ್ಡಿ ನೀಡುವುದಲ್ಲದೇ, ಆ ಹಣದ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಸಹ ವಿಧಿಸದಿರುವುದು ಹೆಣ್ಣು ಮಕ್ಕಳಿಗೆ ಸಹಾಯವಾಗುತ್ತದೆ.
ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಹೆಚ್ಚಾಗಿ ಈ ಯೋಜನೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೇಂದ್ರಿಕರಿಸಿದೆ.
ಈ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಗು ಹುಟ್ಟಿದಾಗಿನಿಂದ ಆಕೆಗೆ 10 ವರ್ಷವಾಗುವವರೆಗೆ ಯಾವಾಗ ಬೇಕಾದರೂ ಅಕೌಂಟ್ ತೆರೆಯಬಹುದು. ಅಲ್ಲದೇ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಕೇವಲ 250ರೂಗಳನ್ನು ಕಟ್ಟುವ ಮೂಲಕ ಅಕೌಂಟ್ ಓಪನ್ ಮಾಡಬಹುದು.
ಇದೀಗ ಈ ಯೋಜನೆಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಆ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ಹೌದು ಸೆಪ್ಟೆಂಬರ್‌ಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಬಡ್ಡಿದರದಲ್ಲಿ ಹೆಚ್ಚಳವನ್ನು ಸರ್ಕಾರ ಘೋಷಿಸುವ ನಿರೀಕ್ಷೆಯಿದ್ದು, ಕೇಂದ್ರವು ಹೆಣ್ಣು ಮಕ್ಕಳಿಗಾಗಿ ನಡೆಸಲಾಗುವ ಈ ಯೋಜನೆಯು ಪ್ರಸ್ತುತ ಶೇ.7.60 ರಷ್ಟು ಬಡ್ಡಿದರವನ್ನು ಹೊಂದಿದೆ. ಅದರಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತೀರಿ.
ಸುಕನ್ಯಾ ಸಮೃದ್ಧಿ ಯೋಜನೆಯ ಹೊಸ ನಿಯಮಗಳ ಅಡಿಯಲ್ಲಿ, ಖಾತೆಯಲ್ಲಿನ ತಪ್ಪು ಬಡ್ಡಿಯನ್ನು ಹಿಂತಿರುಗಿಸುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಇದಲ್ಲದೆ, ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ಈ ಮೊದಲು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ಹಿಂದಿನ ನಿಯಮಗಳ ಪ್ರಕಾರ, ಮಗಳು 10 ವರ್ಷಗಳಲ್ಲಿ ಖಾತೆಯನ್ನು ನಿರ್ವಹಿಸಬಹುದು. ಆದರೆ ಹೊಸ ನಿಯಮದಲ್ಲಿ ಇದನ್ನು ಬದಲಾಯಿಸಲಾಗಿದ್ದು, ಈಗ ಹೆಣ್ಣುಮಕ್ಕಳು 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಅನುಮತಿಸುವುದಿಲ್ಲ. ಪಾಲಕರು ಮಾತ್ರ 18 ವರ್ಷ ವಯಸ್ಸಿನವರೆಗೆ ಖಾತೆಯನ್ನು ನಿರ್ವಹಿಸುತ್ತಾರೆ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗೆ ವಾರ್ಷಿಕ ಕನಿಷ್ಠ 250 ಮತ್ತು ಗರಿಷ್ಠ 1.5 ಲಕ್ಷ ಠೇವಣಿ ಇಡಲು ಅವಕಾಶವಿದೆ. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ಖಾತೆ ಡೀಫಾಲ್ಟ್ ಆಗುತ್ತದೆ. ಹೊಸ ನಿಯಮಗಳ ಪ್ರಕಾರ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ, ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಪಾವತಿಸುವುದನ್ನು ಮುಂದುವರಿಸಲಾಗುತ್ತದೆ.
ಈ ಹಿಂದೆ, 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಯಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಮೂರನೇ ಮಗಳು ಹುಟ್ಟಿದ ಮೇಲೂ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದಾಗಿದೆ. ವಾಸ್ತವವಾಗಿ, ಈಗ ಮೊದಲ ಮಗಳ ನಂತರ ಜನಿಸಿದ ಇಬ್ಬರು ಅವಳಿ ಹೆಣ್ಣುಮಕ್ಕಳಿಗೆ ಖಾತೆಯನ್ನು ತೆರೆಯುವ ಅವಕಾಶವಿದೆ. ಈ ರೀತಿಯಾಗಿ ಒಬ್ಬ ವ್ಯಕ್ತಿಯು ಮೂರು ಹೆಣ್ಣುಮಕ್ಕಳ ಖಾತೆಯನ್ನು ತೆರೆಯಬಹುದು.
‘ಸುಕನ್ಯಾ ಸಮೃದ್ಧಿ ಯೋಜನೆ’ಯ ಖಾತೆಯನ್ನು ಮಗಳ ಮರಣ ಅಥವಾ ಮಗಳು ನಿವಾಸ ಬದಲಾಯಿಸಿದ ಮೇಲೆ ಮೊದಲೇ ಮುಚ್ಚಬಹುದು. ಆದರೆ ಈಗ ಖಾತೆದಾರರ ಮಾರಣಾಂತಿಕ ಕಾಯಿಲೆಯೂ ಇದರಲ್ಲಿ ಸೇರಿಕೊಂಡಿದೆ. ರಕ್ಷಕನ ಮರಣದ ಸಂದರ್ಭದಲ್ಲಿಯೂ ಖಾತೆಯನ್ನು ಅವಧಿಗೆ ಮುನ್ನ ಮುಚ್ಚಬಹುದು.
ಈ ಖಾತೆ ತೆರೆಯಲು ನೀವು ಮಾಡಬೇಕಾಗಿರುವುದು ಏನು?
ಮಗುವಿನ ಪೋಷಕರು ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಮಗುವಿನ ಜನ್ಮ ಪ್ರಮಾಣ ಪತ್ರ(Birth Certificate) ವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇದರ ಜೊತೆಗೆ ಫೋಷಕರ ಗುರುತಿನ ಚೀಟಿ ಹಾಗೂ ಮನೆಯ ವಿಳಾಸದ(Address Proof) ದಾಖಲೆಗಳನ್ನು ಸಹ ನೀಡಬೇಕು.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ಹೆಣ್ಣು ಮಗುವಿನ ಹೆಸರಿನಲ್ಲಿಯೇ ತೆರೆಯಬೇಕು, ಹಾಗೂ ಒಂದು ಮಗುವಿನ ಹೆಸರಿನಲ್ಲಿ ಕೇವಲ ಒಂದು ಅಕೌಂಟ್ ಮಾತ್ರ ಓಪನ್ ಮಾಡಲು ಅವಕಾಶವಿದೆ. ಆದರೆ ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದರೆ ಈ ಯೋಜನೆ ಲಾಭ ಪಡೆಯಬಹುದು. ಆಕಸ್ಮಿಕವಾಗಿ ಕುಟುಂಬದಲ್ಲಿ ತ್ರಿವಳಿ ಹೆಣ್ಣುಮಕ್ಕಳು ಹುಟ್ಟಿದರೆ, ಅವರು ಕೂಡ ಈ ಯೋಜನೆಯ ಲಾಭ ಪಡೆಯಬಹುದು.
ಇನ್ನು ವರ್ಷಕ್ಕೆ 250 ರೂಗಳನ್ನು ಕಟ್ಟದಿದ್ದಲ್ಲಿ ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ, ಖಾತೆ ನಿಷ್ಕ್ರಿಯಗೊಳ್ಳಲಿದೆ. ಒಂದು ವೇಳೆ ಈ ರೀತಿ ನಿಷ್ಕ್ರಿಯಗೊಂಡರೆ ಖಾತೆ ತೆರೆದ 15 ವರ್ಷದ ಒಳಗೆ 50ರೂ ದಂಡವನ್ನು ಕಟ್ಟಿ ಪುನಃ ಖಾತೆಯನ್ನು ಸಕ್ರಿಯಗೊಳಿಸಿ ಬಳಕೆ ಮಾಡಬಹುದು. ಹಾಗಾಗಿ ಪ್ರತಿ ವರ್ಷ 250 ರೂಗಳನ್ನು ಕಡ್ಡಾಯವಾಗಿ ಖಾತೆಗೆ ಜಮಾ ಮಾಡಬೇಕು. ಇನ್ನು ಈ ಯೋಜನೆಯ ಅಡಿಯಲ್ಲಿ ಯಾವುದೇ ಸಾಲ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ದೇಶದಲ್ಲಿ ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಈ ಯೋಜನೆಯಲ್ಲು ಹಲವಾರು ಜನರು ಸದುಪಯೋಗ ಮಾಡಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಜೀವನಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಈ ಯೋಜನೆ ಉತ್ತಮ ಆಯ್ಕೆಯಾಗಿದ್ದು, ಬಾಲಕಿಯರೆಲ್ಲ ಈ ಯೋಜನೆಯ ಲಾಭ ಪಡೆಯಬಹುದು.