ಬಾಳಿ ಬದುಕಿದ್ದ ಮನೆಯನ್ನೇ ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ – ನಷ್ಟದಲ್ಲಿದ್ದಾರಾ ರವಿಮಾಮ?

ನ್ಯೂಸ್ ಆ್ಯರೋ : ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ನ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ರವಿಮಾಮನ ಹಿರಿಯ ಪುತ್ರ, ಯುವ ನಟ ಮನೋರಂಜನ್ ಅವರ ಮದುವೆ ಶುಭ ಕಾರ್ಯ ನಡೆದಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೀಗ ಬಾಳಿ ಬದುಕಿದ ಮನೆಯನ್ನೇ ಕನಸುಗಾರ ತೊರೆದು ಬೇರೆಡೆ ಶಿಫ್ಟ್ ಆಗಿದ್ದು, ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿದ್ದ ಅವರ ಮನೆಯನ್ನು ಖಾಲಿ ಮಾಡಿದ್ದಾರೆ.
ದಶಕಗಳಿಂದ ವಾಸ ಮಾಡುತ್ತಿದ್ದ ಮನೆಯನ್ನು ದಿಢೀರ್ ಅಂತ ಖಾಲಿ ಮಾಡಿದ್ದು, ಮಗನ ಮದುವೆ ಆದ ಬೆನ್ನಲೇ ಇಂತಹ ನಿರ್ಧಾರ ಮಾಡಿರುವುದು ನಾನಾ ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ.
ಹಾಗಾದ್ರೆ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ತಾವು ಇಷ್ಟಪಟ್ಟು ಕಟ್ಟಿದ್ದ ಮನೆ ಖಾಲಿ ಮಾಡಿದ್ದೇಕೆ? ಸದ್ಯ ಅವರು ಎಲ್ಲಿ ನೆಲೆಸಿದ್ದಾರೆ ? ಎಂಬೆಲ್ಲಾ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಹೌದು.. ಕೆಲ ದಿನಗಳಿಂದ ರವಿಚಂದ್ರನ್ ಮನೆ ಕುರಿತಂತೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ರವಿಚಂದ್ರನ್ ಅವರು ಮನೆ ಖಾಲಿ ಮಾಡಿದ್ದಾರಂತೆ. ಬೇರೆ ಮನೆಗೆ ಶಿಫ್ಟ್ ಆಗಿದ್ದಾರಂತೆ. ಈ ಮನೆಯನ್ನು ವಾಸ್ತುಪ್ರಕಾರ ಬದಲಾಯಿಸ್ತಾರಂತೆ. ಹೀಗೆ ಅನೇಕ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಆದರೆ ಇದಕ್ಕೆ ಸರಿಯಾದ ಕಾರಣವೇನು ಎಂಬುದು ಮಾತ್ರ ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಇದೀಗ ಆ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ರವಿಚಂದ್ರನ್ ಅವರು ರಾಜಾಜಿನಗರದ ಮನೆಯಿಂದ ಬೇರೆ ಮನೆಗೆ ಹೋಗಿದ್ದರ ಹಿಂದಿನ ಅಸಲಿ ಕಾರಣ ಬಹಿರಂಗವಾಗಿದೆ.
ವಾಸ್ತವವಾಗಿ ರವಿಚಂದ್ರನ್ ಸಂಪೂರ್ಣವಾಗಿ ಮನೆ ತೊರೆದಿಲ್ಲ. ಹೊರತಾಗಿ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಮಗನ ಮದುವೆ ಬಳಿಕ ಹೊಸ ಮನೆಗೆ ಶಿಫ್ಟ್ ಆಗಬೇಕು ಎಂಬುದನ್ನು ರವಿಚಂದ್ರನ್ ಕುಟುಂಬಸ್ಥರು ಮೊದಲೇ ನಿರ್ಧರಿಸಿದ್ದರು. ಕಳೆದ ತಿಂಗಳಷ್ಟೇ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಮದುವೆ ಆಗಿತ್ತು.
ಮದುವೆ ನಂತರ ಅವರು ಬೇರೆ ಮನೆಯಲ್ಲಿ ಇರುತ್ತಾರೆ ಅನ್ನೋದನ್ನು ಕ್ರೇಜಿ ಸ್ಟಾರ್ ಕುಟುಂಬ ಮೊದಲೇ ಪ್ಲ್ಯಾನ್ ಮಾಡಿತ್ತು. ಆದರೆ ದಿಢೀರ್ ಅಂತ ಬೇರೆ ಮನೆಗೆ ಶಿಫ್ಟ್ ಆದರೆ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕಾಗಿ ಒಂದಷ್ಟು ದಿನ ಅವರ ಜೊತೆಯಲ್ಲೇ ಇರಬೇಕು ಎಂಬುದು ರವಿಚಂದ್ರನ್ ಅವರ ನಿರ್ಧಾರ. ಆ ಕಾರಣಕ್ಕಾಗಿಯೇ ಇಡೀ ಕುಟುಂಬ ಈಗ ಹೊಸ ಮನೆಗೆ ಶಿಫ್ಟ್ ಆಗಿದೆ.
ಆದರೆ ಹಳೆ ಮನೆಯಲ್ಲಿಯೂ ತಾನು ಇರುವುದಾಗಿ ತಿಳಿಸಿರುವ ಚಂದನವನದ ಕಲಾಕಾರ ತಮ್ಮ ಸಿನಿಮಾ ಸಂಬಂಧಿ ಕೆಲಸಗಳನ್ನು ಇಲ್ಲಿಯೇ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ಹೊಸಕೆರೆ ಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ರವಿಚಂದ್ರನ್ ವಾಸವಿದ್ದು, ಮಗ ಸೊಸೆಯೊಂದಿಗೆ ಹ್ಯಾಪಿಯಾಗಿ ಸಮಯ ಕಳೆಯುತ್ತಿದ್ದಾರೆ.
ಇನ್ನೂ ರಾಜಾಜಿನಗರದ ಮನೆಯೊಂದಿಗೆ ರವಿಚಂದ್ರನ್ ಕುಟುಂಬಕ್ಕೆ ಭಾವನಾತ್ಮಕ ಸಂಬಂಧ ಇದ್ದು, ರವಿ ಅವರ ತಂದೆ ವೀರಾಸ್ವಾಮಿ ಅವರು ಬದುಕಿದ್ದ ಕಾಲದಲ್ಲೇ ಆ ಮನೆ ಕನ್ನಡ ಚಿತ್ರರಂಗಕ್ಕೆ ಹತ್ತಿರವಾಗಿತ್ತು. ಆದರೆ ಆ ಮನೆಯನ್ನು ಖಾಲಿ ಮಾಡಬೇಕು ಎಂದು ಬಹಳ ಹಿಂದೆಯೇ ರವಿಚಂದ್ರನ್ ಅವರು ನಿರ್ಧರಿಸಿದ್ದರು. ಆದರೆ ರವಿ ಅವರ ತಾಯಿ ಪಟ್ಟಮ್ಮಾಳ್ ಆ ಮನೆಯೊಂದಿಗೆ ಭಾವನಾತ್ಮಕವಾಗಿ ಹೆಚ್ಚು ಕನೆಕ್ಟ್ ಆಗಿದ್ದರು. ಅಲ್ಲಿಂದ ಬೇರೆ ಕಡೆಗೆ ಹೋಗುವುದು ಅವರಿಗೂ ಇಷ್ಟವಿರಲಿಲ್ಲ. ಆ ಕಾರಣದಿಂದ ರವಿಚಂದ್ರನ್ ಕೂಡ ಮನೆ ಬದಲಿಸುವ ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು ಎನ್ನಲಾಗಿದೆ.