1. Home
  2. Entertainment
  3. Kantara : ವರಾಹ ರೂಪಂ, ಸಿಂಗಾರ ಸಿರಿಯೇ ಹಾಡಿನ ಟ್ಯೂನ್ ನಕಲಿ ಆರೋಪ – ಸಂಗೀತ ನಿರ್ದೇಶಕ ಅಜನೀಶ್ ಹೇಳಿದ್ದೇನು?

Kantara : ವರಾಹ ರೂಪಂ, ಸಿಂಗಾರ ಸಿರಿಯೇ ಹಾಡಿನ ಟ್ಯೂನ್ ನಕಲಿ ಆರೋಪ – ಸಂಗೀತ ನಿರ್ದೇಶಕ ಅಜನೀಶ್ ಹೇಳಿದ್ದೇನು?

Kantara : ವರಾಹ ರೂಪಂ, ಸಿಂಗಾರ ಸಿರಿಯೇ ಹಾಡಿನ ಟ್ಯೂನ್ ನಕಲಿ ಆರೋಪ – ಸಂಗೀತ ನಿರ್ದೇಶಕ ಅಜನೀಶ್ ಹೇಳಿದ್ದೇನು?
0

ನ್ಯೂಸ್ ಆ್ಯರೋ‌ : ರಿಷಭ್ ಶೆಟ್ಟಿ ನಿರ್ದೇಶನ, ನಟನೆಯ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ತುಳುನಾಡಿನ ಸಂಸ್ಕೃತಿ, ಆಚರಣೆ, ದೈವಾರಾಧನೆಯನ್ನು ಕಟ್ಟಿಕೊಟ್ಟಿರುವ ಸಿನಿಮಾಗೆ ಕನ್ನಡಿಗರು ಮಾತ್ರವಲ್ಲ, ದೇಶಾದ್ಯಂತ ಜನರು ಫಿದಾ ಆಗಿದ್ದಾರೆ. ರಿಷಭ್ ಶೆಟ್ಟಿ ಅಭಿನಯ ಪ್ರೇಕ್ಷಕರನ್ನು ಬೆರಗಾಗಿಸಿದೆ. ಥಿಯೇಟರ್ ಮುಂದೆ ಜಾತ್ರೆಯಂತೆ ಜನರು ಸೇರುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ 2ನೇ ವಾರ ಭರ್ಜರಿಯಾಗಿ ಓಡುತ್ತಿದ್ದು, ಬೇಡಿಕೆ ಮೇರೆಗೆ ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಇತರೆ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಮಾಡಲು ಸಿನಿತಂಡ ತಯಾರಿ ನಡೆಸಿದೆ. ಈ ಮಧ್ಯೆ ಕಾಂತಾರ ಸಿನಿಮಾದ ಬಗ್ಗೆ ಅಪವಾದವೊಂದು ಕೇಳಿ ಬಂದಿದೆ.

ಕಾಂತಾರ ಸಿನಿಮಾದ ಕಂಟೆಂಟ್, ಮೇಕಿಂಗ್, ಅಭಿನಯಕ್ಕೆ ಮಾತ್ರವಲ್ಲ, ಚಿತ್ರದ ಹಾಡುಗಳಿಗೂ ಪ್ರೇಕ್ಷಕ ಮನಸೋತಿದ್ದಾನೆ. ಎಲ್ಲಿ ನೋಡಿದರೂ ವರಾಹ ರೂಪಂ, ಸಿಂಗಾರ ಸಿರಿಯೇ ಹಾಡು ಮಾರ್ದನಿಸುತ್ತಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಬಗ್ಗೆ ಭಾರಿ ಮೆಚ್ಚುಗೆ ಕೇಳಿಬಂದಿತ್ತು. ನಟ ಸುದೀಪ್ ಸಿನಿಮಾ ಬಗ್ಗೆ ರಿವ್ಯೂ ಬರೆದಿದ್ದು, ಅಜನೀಶ್ ಸಂಗೀತವನ್ನು ಹಾಡಿ ಹೊಗಳಿದ್ದರು. ಆದ್ರೆ ಈ ಮಧ್ಯೆ ವರಾಹ ರೂಪಂ, ಸಿಂಗಾರ ಸಿರಿಯೇ ಹಾಡಿನ ಟ್ಯೂನ್ ಕಾಪಿ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಾಂತಾರ ಸಿನಿಮಾದ ಜೀವಾಳವೇ ಆಗಿರುವ ‘ವರಾಹ ರೂಪಂ’ ಹಾಡಿಗೆ ಮಲಯಾಳಂನ ‘ನವರಸಂ’ ಹಾಡಿನ ಟ್ಯೂನ್ ಕದ್ದು ಹಾಕಿದ್ದಾರೆ ಎನ್ನುವುದು ಕೆಲವರ ವಾದ. ಇನ್ನು ಸಿಂಗಾರ ಸಿರಿಯೇ ಹಾಡಿಗೆ ಮರಾಠಿಯ ‘ಅಪ್ಸರಾ ಅಲಿ’ ಹಾಡಿನ ಟ್ಯೂನ್ ಕದ್ದಿದ್ದಾರೆ ಅಂತ ಆರೋಪಿಸಲಾಗಿದೆ. ಆದ್ರೆ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಆರೋಪ ಸುಳ್ಳು, ಕಾಪಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಂತಾರ ಸಿನಿಮಾದ ‘ವರಹ ರೂಪಂ’ ಸಾಂಗ್‌ ಹಾಗೂ ‘ನವರಸಂ’ ಆಲ್ಬಮ್ ಸಾಂಗ್’ನ ಟ್ಯೂನ್’ಗೂ ಸಾಮ್ಯತೆ ಇದೆ. ಆದ್ರೆ ನಾವು ಕಾಪಿ ಮಾಡಿಲ್ಲ. ‘ವರಹ ರೂಪಂ’ ಹಾಡು ಈಗಾಗಲೇ ಎಲ್ಲಾ ಕಡೆಯೂ ಶೇರ್ ಆಗಿದೆ. ಒಂದುವೇಳೆ ಕಾಪಿ ಮಾಡಿದ್ದರೆ, ಆಲ್ಬಮ್ ಸಾಂಗ್ ಮಾಡಿದವರು ಈ ಬಗ್ಗೆ ಕಂಪ್ಲೆಂಟ್ ಮಾಡುತ್ತಿದ್ದರು. ಯಾಕೆಂದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಯಾವುದು ಕಾಪಿ ? ಯಾವುದು ಕಾಪಿ ಅಲ್ಲ ಎನ್ನುವುದು ಗೊತ್ತಾಗುತ್ತದೆ. ‘ನವರಸಂ’ ಆಲ್ಬಮ್ ಸಾಂಗ್’ನ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್ ಆಗಿದ್ದೀವಿ ನಿಜ. ಆದ್ರೆ ಕಾಪಿ ಮಾಡಿಲ್ಲ. ವರಹ ರೂಪಂ ಹಾಗೂ ನವರಸಂ ಎರಡೂ ಹಾಡುಗಳ ಸಂಯೋಜನೆ ಬೇರೆ ಬೇರೆ ಎಂದು ಅಜನೀಶ್ ಹೇಳಿದ್ದಾರೆ.

ಇಂಗ್ಲಿಷ್ ಸಾಂಗ್ಸ್ ಕೇಳಿ ಕೆಲವೊಮ್ಮೆ ಇದೇ ಸ್ಟೈಲ್‌ನಲ್ಲಿ ಸಾಂಗ್ ಮಾಡೋಣ ಎಂದುಕೊಳ್ಳುತ್ತೀವಿ ಅಲ್ವಾ? ಅದೇ ರೀತಿ ಇದು. ನಾವು ತೋಡಿ, ವರಾಳಿ, ಮುಖಾರಿ ರಾಗಗಳನ್ನು ಬಳಸಿ ಈ ಸಾಂಗ್ ಮಾಡಿದ್ದೇವೆ. ರಾಗಗಳ ಛಾಯೆ ಒಂದೇ ರೀತಿ ಇರುವುದರಿಂದ ಕೆಲವರಿಗೆ ಸಾಮ್ಯತೆಯಿದೆ ಅನಿಸಿರಬಹುದು. ಆದರೆ ಸಂಯೋಜನೆ ಬೇರೆ, ಟ್ಯೂನ್ ಬೇರೆ. ರಿದಮ್ಸ್, ಇನ್‌ಸ್ಟ್ರೂಮೆಂಟ್ಸ್ ಇರೋದನ್ನೇ ಬಳಸೋಕೆ ಸಾಧ್ಯ. ನಾನು ಎಲೆಕ್ಟ್ರಿಕ್ ಗಿಟಾರ್ ಬಳಸಿದ್ದೀನಿ. ಮ್ಯೂಸಿಕ್ ಗೊತ್ತಿರುವವರು ಯಾರು ಕೂಡ ಇದು ಕಾಪಿ ಎಂದು ಹೇಳುವುದಿಲ್ಲ. ಎರಡೂ ಕೂಡ ಬೇರೆ ಬೇರೆ ಕಂಪೋಸಿಷನ್ ಎಂದು ಅಜನೀಶ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಕಾಂತಾರ ಸಿನಿಮಾವನ್ನು ಪ್ರೇಕ್ಷಕ ಒಪ್ಪಿಕೊಂಡಿದ್ದು, ಸಿನಿಮಾ ಪೂರ್ತಿ ತುಳುನಾಡ ಸಂಸ್ಕೃತಿ ಆವರಿಸಿಕೊಂಡಿದೆ. ದೈವಾರಾಧನೆಯನ್ನು ದೇಶಕ್ಕೆ ಪರಿಚಯಿಸಿರುವ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಚಿತ್ರದ ಯಶಸ್ಸಿನ ಸಮಯದಲ್ಲಿ ಇಂತಹ ಆರೋಪಗಳು ಬಂದರೂ ಅದು ಸಿನಿಮಾ ಮೇಲೆ ಯಾವ ಎಫೆಕ್ಟ್ ಮಾಡಿಲ್ಲ. ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲೂ ಮುಂದಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..