ತೆಲುಗಿನಲ್ಲೂ ‘ಕಾಂತಾರ ಒಂದು ದಂತಕಥೆ’ ಅಬ್ಬರ – ಭಾರಿ ಲಾಭ ಗಳಿಸಿದ ಅಲ್ಲು ಅರ್ಜುನ್ ತಂದೆ

ನ್ಯೂಸ್ ಆ್ಯರೋ : ದೇಶದಲ್ಲಿ ಕಾಂತಾರ ಹವಾ ಜೋರಾಗಿದೆ. ಮೂರನೇ ವಾರವೂ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿರುವ ಕಾಂತಾರ ಸಿನಿಮಾ ಸ್ಯಾಂಡಲ್ವುಡ್ ಹಿರಿಮೆಯನ್ನು ಉತ್ತುಂಗಕ್ಕೆ ಏರಿಸಿದೆ. ಐಎಂಡಿಬಿ, ಬುಕ್ ಮೈಶೋನಲ್ಲಿ ಹಿಂದೆಂದೂ ಮಾಡದ ದಾಖಲೆಯನ್ನು ಮಾಡಿದೆ. ಕೆಜಿಎಫ್’ನಂತಹ ಬಿಗ್ ಬಜೆಟ್ ಸಿನಿಮಾಗಳನ್ನೇ ಹಿಂದಿಕ್ಕಿದೆ. ಕನ್ನಡದಲ್ಲಿ ಅಬ್ಬರಿಸುತ್ತಿರುವಾಗಲೇ ಪರಭಾಷೆಗಳಿಗೂ ಡಬ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ವರ್ಷನ್’ನಿಂದ ನಿರೀಕ್ಷೆಗೂ ಮೀರಿದ ಲಾಭ ಪಡೆದುಕೊಳ್ಳುತ್ತಿದೆ. ತೆಲುಗಿನಲ್ಲಿ ವಿತರಣೆ ಹಕ್ಕುಗಳನ್ನು ಖರೀದಿಸಿದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಭಾರಿ ಲಾಭಗಳಿಸಿದ್ದಾರೆ ಎನ್ನಲಾಗುತ್ತಿದೆ.
ತುಳುನಾಡ ಮಣ್ಣಿನ ಕಥೆಗೆ ತೆಲುಗು ಸಿನಿ ಪ್ರೇಕ್ಷಕರಿಂದಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಿಷಬ್ ನಟನೆ, ನಿರ್ದೇಶನಕ್ಕೆ ತೆಲುಗು ಪ್ರೇಕ್ಷಕರು ಮನಸೋತಿದ್ದಾರೆ. ಇದರಿಂದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರ ಜೇಬು ತುಂಬುತ್ತಿದೆ. ‘ಹೊಂಬಾಳೆ ಫಿಲ್ಮ್ಸ್ ’ ಕಡೆಯಿಂದ ಕಾಂತಾರ ಸಿನಿಮಾದ ತೆಲುಗು ವಿತರಣೆ ಹಕ್ಕುಗಳನ್ನು ಖರೀದಿಸಿದ ಅಲ್ಲು ಅರವಿಂದ್ ಸಖತ್ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅಲ್ಲು ಅರವಿಂದ್ ಅವರು ಕೇವಲ 3 ಕೋಟಿ ರೂಪಾಯಿಗೆ ‘ಕಾಂತಾರ’ ಚಿತ್ರದ ತೆಲುಗು ವಿತರಣೆ ಹಕ್ಕನ್ನು ಖರೀದಿಸಿದ್ದರು. ಆದ್ರೆ ಈಗಾಗಲೇ ಬಾಕ್ಸ್ ಆಫೀಸ್ ಕಲೆಕ್ಷನ್ 3 ಕೋಟಿ ಮೀರಿದ್ದು, ಲಾಭ ಗಳಿಸುತ್ತಿದ್ದಾರೆ ಎನ್ನಲಾಗಿದೆ.
ತೆಲುಗು ಮಾತ್ರವಲ್ಲ. ಹಿಂದಿ, ತಮಿಳು, ಮಲಯಾಳಂ ವರ್ಷನ್’ಗೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕಾಂತಾರ ಸಿನಿಮಾ ನೋಡಿದ ಹಿಂದಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ಮಂದಿಯನ್ನೂ ನಡುಗಿಸಿಬಿಟ್ಟಿದೆ ಕರಾವಳಿಯ ಈ ಕಥೆ. ಹೊರರಾಜ್ಯಗಳ ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿದ್ದು, ಪಾಸಿಟಿವ್ ರಿವ್ಯೂಸ್ ಕೇಳಿಬರುತ್ತಿದೆ.
ಸೋಷಿಯಲ್ ಮೀಡಿಯಾ, ಟಿವಿ ಮಾಧ್ಯಮ, ಪತ್ರಿಕೆಗಳು ಮಾತ್ರವಲ್ಲದೆ ಬಾಯಿಮಾತಿನಲ್ಲಿಯೂ ಜನರು ಕಾಂತಾರ ಸಿನಿಮಾದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಇದು ಕಾಂತಾರ ಸಿನಿತಂಡಕ್ಕೆ ಪ್ಲಸ್ ಪಾಯಿಂಟ್. ಕಡಿಮೆ ಬಜೆಟ್ ಸಿನಿಮಾವೊಂದು ಈ ರೀತಿ ಹಿಟ್ ಆಗಿರೋದು ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದೆ.