ಬಿಗ್ ಬಾಸ್ ಹಿಂದಿ ಸೀಸನ್ 16 ನಿರೂಪಣೆಗೆ ಸಲ್ಮಾನ್ ಗೆ ಸಾವಿರ ಕೋಟಿ ಸಂಭಾವನೆ..!! – ಕಲರ್ಸ್ ವಾಹಿನಿ ಹೇಳಿದ್ದೇನು…!?

ನ್ಯೂಸ್ ಆ್ಯರೋ : ನಟ ಸಲ್ಮಾನ್ ಖಾನ್ ಅವರು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ನಿರೂಪಕನಾಗಿಯೂ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್ ನಿರೂಪಣೆ ಮಾಡುವ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನೇಕ ಸೀಸನ್ಗಳಿಂದ ಅವರೇ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡು ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಆರಂಭವಾಗಲಿದ್ದು, ಈ ಹೊಸ ಆವೃತ್ತಿಗಾಗಿ ಸಲ್ಮಾನ್ ಖಾನ್ ಅವರು ಬರೋಬ್ಬರಿ 1000 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಹರಡಿದೆ.
ಆದರೆ ಈ ವೈರಲ್ ಸುದ್ದಿಗೆ ಸಲ್ಮಾನ್ ತೆರೆ ಎಳೆದಿದ್ದು, ನಾನು ಅಷ್ಟೊಂದು ಹಣವನ್ನು ಜೀವನದಲ್ಲಿ ಕಂಡಿಲ್ಲ. ಅಷ್ಟೊಂದು ಹಣ ಸಿಕ್ಕರೆ ನಿಜವಾಗಲೂ ಕೆಲಸ ಮಾಡಲ್ಲ. ನನಗೆ ವಕೀಲರಂತೆ ಸಾಕಷ್ಟು ಖರ್ಚುಗಳಿವೆ. ಈ ವದಂತಿಗಳಿಂದಾಗಿ ಆದಾಯ ತೆರಿಗೆ ಇಲಾಖೆಯವರು ನನ್ನ ಮನೆಗೆ ಬರುತ್ತಾರೆ’ ಎಂದು ಹಾಸ್ಯಮಯವಾಗಿಯೇ ಸಲ್ಲು ಉತ್ತರಿಸಿದ್ದಾರೆ.
ಸಾವಿರ ಕೋಟಿ ಸಂಭಾವನೆಯಲ್ಲಿ ಕಾಲು ಭಾಗದ ಹಣ ಬಂದರೆ ಅದೇ ನನಗೆ ಸಾವಿರ ಕೋಟಿ. ಆದರೆ, ಅದು ಸಾಧ್ಯವಿಲ್ಲವೆ? ನನಗೂ ಸಾವಿರ ಕೋಟಿ ಸಂಭಾವನೆ ಪಡೆಯಬೇಕು ಎನ್ನುವ ಆಸೆಯಿದೆ. ಅಂಥದ್ದೊಂದು ಕಾಲ ಯಾವಾಗ ಕೂಡಿ ಬರುತ್ತದೆಯೋ ಕಾದು ನೋಡಬೇಕು ಎಂದು ಅವರು ಮಾತನಾಡಿದ್ದಾರೆ. ಸಾವಿರ ಕೋಟಿ ಸಂಭಾವನೆಯನ್ನು ಪಡೆಯುತ್ತೇನೆ ಎನ್ನುವುದು ಸುಳ್ಳು ಎಂದೂ ಅವರು ತಿಳಿಸಿದ್ದಾರೆ.
ಇನ್ನೂ ಮೂಲಗಳ ಪ್ರಕಾರ, ಕಳೆದ ಸೀಸನ್ನಲ್ಲಿ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ನಿರೂಪಣೆಗೆ 350 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು. ಈ ವರ್ಷ ಅದನ್ನು ಮೂರು ಪಟ್ಟು ಹೆಚ್ಚು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಗಾಸಿಪ್ ಆಗಿತ್ತು. ಆದರೆ ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ.
ಈ ಸಂಖ್ಯೆಗಳ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆ ಪ್ರಕಟ ಆಗಿಲ್ಲ. ಹೊಸ ಸೀಸನ್ ಯಾವಾಗ ಆರಂಭ ಆಗಲಿದೆ ಎಂಬುದು ಕೂಡ ತಿಳಿದುಬಂದಿಲ್ಲ. ಪ್ರೇಕ್ಷಕರ ಊಹೆಯ ಪ್ರಕಾರ, ಅಕ್ಟೋಬರ್ 1ರಂದು ‘ಬಿಗ್ ಬಾಸ್ ಹಿಂದಿ ಸೀಸನ್ 16’ ಪ್ರಾರಂಭ ಆಗಲಿದೆ.
ಕಳೆದ ವರ್ಷ ಹಿಂದಿಯಲ್ಲಿ ‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ ಪ್ರಸಾರ ಆಯಿತು. ಅದನ್ನು ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆ ಕಾರ್ಯಕ್ರಮದಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಂದಿಲ್ಲ ಎಂಬ ಮಾತಿದೆ. ಆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರೇಕ್ಷಕರಿಗೆ ನಿರಾಸೆ ಕಾದಿತ್ತು.
ಆದರೆ ಗುಸುಗುಸು ಕುರಿತಂತೆ ಇನ್ನೊಂದು ಮಾಹಿತಿ ಹೊರಬಿದ್ದಿದ್ದು, ಕಲರ್ಸ್ ವಾಹಿನಿಯವರು ಸಾವಿರ ಕೋಟಿ ರೂಪಾಯಿ ಸಂಭಾವನೆ ನೀಡಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣದಿಂದ ಅಷ್ಟು ಸಂಬಳ ನೀಡಲು ಸಾಧ್ಯವಿಲ್ಲ ಎಂದಿದ್ದಾರಂತೆ ಎಂಬ ಬಗ್ಗೆಯೂ ಮಾತು ಕೇಳಿಬರುತ್ತಿದೆ.