1. Home
  2. Entertainment
  3. ನಯನತಾರಾ ದಂಪತಿಗಳ ಬಾಡಿಗೆ ತಾಯ್ತನ ವಿರುದ್ಧ ತನಿಖೆಗೆ ಸರ್ಕಾರದ ಆದೇಶ – ಈ ಬಗ್ಗೆ ಕಾನೂನು ಏನು ಹೇಳುತ್ತದೆ..? ಸಚಿವರು ಹೇಳಿದ್ದೇನು..?

ನಯನತಾರಾ ದಂಪತಿಗಳ ಬಾಡಿಗೆ ತಾಯ್ತನ ವಿರುದ್ಧ ತನಿಖೆಗೆ ಸರ್ಕಾರದ ಆದೇಶ – ಈ ಬಗ್ಗೆ ಕಾನೂನು ಏನು ಹೇಳುತ್ತದೆ..? ಸಚಿವರು ಹೇಳಿದ್ದೇನು..?

ನಯನತಾರಾ ದಂಪತಿಗಳ ಬಾಡಿಗೆ ತಾಯ್ತನ ವಿರುದ್ಧ ತನಿಖೆಗೆ ಸರ್ಕಾರದ ಆದೇಶ – ಈ ಬಗ್ಗೆ ಕಾನೂನು ಏನು ಹೇಳುತ್ತದೆ..? ಸಚಿವರು ಹೇಳಿದ್ದೇನು..?
0

ನ್ಯೂಸ್ ಆ್ಯರೋ : ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿದ್ದು, ಇದೀಗ ಚಿತ್ರ ಲೋಕದಲ್ಲಿ ನಯನತಾರಾ ಅವರ ಬಾಡಿಗೆ ತಾಯ್ತನದ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಭಾರತದಲ್ಲಿ ಇದು ಕಾನೂನುಬದ್ಧವೇ ಅಥವಾ ಅಲ್ಲವೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕಳೆದ ಜನವರಿಯಲ್ಲಿ ತಿದ್ದುಪಡಿಯಾಗಿರುವ ಬಾಡಿಗೆ ತಾಯ್ತನದ ಕಾನೂನು ನಿಯಮಕ್ಕೆ ನಯನತಾರಾ ಒಳಪಟ್ಟಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಹೌದು.. ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಮದುವೆ ಆದ ನಾಲ್ಕೇ ತಿಂಗಳಿಗೆ ಮಗು ಪಡೆದಿದ್ದು, ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಬಗ್ಗೆ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೀಗ ಈ ವಿಚಾರ ಸಾಕಷ್ಟು ಗೊಂದಲಗಳನ್ನು ಹುಟ್ಟಿಹಾಕಿದ್ದು, ಬಾಡಿಗೆ ತಾಯ್ತನದ ವಿಚಾರದಲ್ಲಿ ಸರ್ಕಾರ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯತಾರಾ ಹಾಗೂ ವಿಘ್ನೇಶ್ ಉಲ್ಲಂಘಿಸಿದ್ದು, ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದ್ದು, ಸರೋಗಸಿ ಮೂಲಕ ಮಕ್ಕಳನ್ನು ಪಡೆದಿದ್ದಾರೆ ಎಂದು ಸುದ್ದಿ ಹಬ್ಬಿದ್ದರೂ ಈ ಬಗ್ಗೆ ನಯನತಾರಾ ದಂಪತಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಾಗಿ ನಯನತಾರ – ಶಿವನ್ ದಂಪತಿ ಈ ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಭಾರತೀಯ ಬಾಡಿಗೆ ತಾಯ್ತನದ ಕಾನೂನುಗಳನ್ನು ದಂಪತಿಯು ಅನುಸರಿಸಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಅವರಿಗೆ ಪ್ರಶ್ನೆ ಕೇಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕಾನೂನು ಏನು ಹೇಳುತ್ತದೆ..?

21 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 36 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಕುಟುಂಬದ ಅನುಮೋದನೆಯೊಂದಿಗೆ ಬಾಡಿಗೆ ತಾಯ್ತನದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಭಾರತದಲ್ಲಿ ಕಮರ್ಷಿಯಲ್ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿದೆಯಾದರೂ, ಬಾಡಿಗೆ ತಾಯ್ತನಕ್ಕೆ ಮುಂದಾಗುವರು ಮದುವೆಯಾಗಬೇಕು ಮತ್ತು ತನ್ನ ಸ್ವಂತ ಮಗುವನ್ನು ಹೊಂದಿರಬೇಕು ಎಂಬುದು ಕಾನೂನಿನಲ್ಲಿದೆ.

ಬಾಡಿಗೆ ತಾಯ್ತನ ನಿಯಂತ್ರಣ ಕಾಯಿದೆ ಪ್ರಕಾರ, ಜನವರಿ 25, 2022 ರಿಂದ ಕಮರ್ಷಿಯಲ್ ಬಾಡಿಗೆ ತಾಯ್ತನ ನಿಷೇಧವಾಗಿದೆ. ಕೇವಲ ಇದರಲ್ಲಿ ವೈದ್ಯಕೀಯ ವೆಚ್ಚಗಳು ಮತ್ತು ಬಾಡಿಗೆ ತಾಯ್ತನ ಒಳಪಟ್ಟವರ ಇನ್ಸುರೆನ್ಸ್‌ಗಳನ್ನು ಮಾತ್ರ ಭರಿಸಬೇಕೆ ವಿನಃ, ಬೇರೆ ಯಾವುದೇ ಶುಲ್ಕ ಮತ್ತು ವೆಚ್ಚಗಳನ್ನು ಪೋಷಕರು ಭರಿಸುವಂತೆ ಇಲ್ಲ. ಹಾಗೊಂದು ವೇಳೆ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಅಲ್ಲದೇ ಇಬ್ಬರಲ್ಲಿ ಒಬ್ಬರಿಗೆ ಮಗು ಹೆರುವ ಸಾಮರ್ಥ್ಯವಿಲ್ಲದಿದ್ದರೆ ಮದುವೆಯಾದ 5 ವರ್ಷಗಳ ನಂತರವೇ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು ಎಂಬ ನಿಯಮವೂ ಇದೆ. ಈ ಹಿನ್ನೆಲೆಯಲ್ಲಿ 37ರ ಹರೆಯದ ನಯನತಾರಾ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೆರಲು ಅರ್ಹರಲ್ಲ ಎಂಬ ದೊಡ್ಡ ಚರ್ಚೆ ನಡೆಯುತ್ತಿದೆ.

ಸಚಿವರು ಹೇಳಿದ್ದೇನು..?

ನಯನತಾರಾ ಬಾಡಿಗೆ ತಾಯ್ತನ ವಿವಾದದ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಆರೋಗ್ಯ ಸಚಿವರು, ಬಾಡಿಗೆ ತಾಯ್ತನವನ್ನು ಕಾನೂನುಬದ್ಧವಾಗಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಆರೋಗ್ಯ ಇಲಾಖೆ ವಿಚಾರಣೆ ನಡೆಸಲಾಗುವುದು. ಬಾಡಿಗೆ ತಾಯ್ತನದ ಅವಕಾಶವು ಮಕ್ಕಳನ್ನು ಹೊಂದಲು ಸಾಧ್ಯವಾಗದಂತಹ ಕೆಲವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಈ ಬಗ್ಗೆ ವಿವರಗಳನ್ನು ಸರ್ಕಾರಕ್ಕೆ ತಿಳಿಸುವಂತೆ ಆರೋಗ್ಯ ಸಚಿವ ಸುಬ್ರಮಣಿಯನ್ ಅವರು ನಯನತಾರಾ ಅವರನ್ನು ಕೇಳಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..