ಕಾಂತಾರವೂ ಗಿಮಿಕ್ ಒಳಗೊಂಡ, ಕಳಪೆ ಮಟ್ಟದ ಸಿನಿಮಾ: ಮತ್ತೊಬ್ಬ ನಿರ್ದೇಶಕ ಟೀಕೆ

ನ್ಯೂಸ್ ಆ್ಯರೋ: ಕಾಂತಾರ ಸಿನಿಮಾ ಇಡೀ ಭಾರತ ಚಿತ್ರೋದ್ಯಮವನ್ನೇ ಕಾಡಿದ ಸಿನಿಮಾ. ಚಿತ್ರ ತೆರೆಕಂಡು ಕೆಲವೇ ಗಂಟೆಗಳಲ್ಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಕಾಂತಾರ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ನಟ ಚೇತನ್ ಭೂತಾರಾಧನೆ, ಹಿಂದುತ್ವ ಸಿನಿಮಾ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಮತ್ತೊಬ್ಬ ಖ್ಯಾತ ನಿರ್ದೇಶಕ ಅಭಿರೂಪ್ ಬಸು ಸಿನಿಮಾ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ನಿರ್ದೇಶಕ ಅಭಿರೂಪ್ ಬಸು, ‘ಜನರ ಬುದ್ಧಿವಂತಿಕೆಯನ್ನು ಈ ಸಿನಿಮಾ ಅಣಕಿಸುತ್ತದೆ ಎಂಬ ಭಾವನೆ ನನ್ನದು. ಚಿತ್ರವನ್ನು ಕಳಪೆಯಾಗಿ ನಿರ್ದೇಶನ ಮಾಡಲಾಗಿದೆ. ಪ್ರಗತಿಪರವಲ್ಲದ ರೀತಿಯಲ್ಲಿದೆ. ಕಥೆಯಲ್ಲಿನ ತಿರುವುಗಳು ತುಂಬ ಅಪ್ರಾಮಾಣಿಕವಾಗಿವೆ. ಕೇವಲ ಗಿಮಿಕ್ ರೀತಿ ಇದೆ. ಹೀರೋ ಪಾತ್ರ ಒಳ್ಳೆಯವನಾಗಿ ಬದಲಾಗುವ ಸನ್ನಿವೇಶ ಹಾಸ್ಯಾಸ್ಪದವಾಗಿದ್ದು, ಇನ್ನೂ ಕ್ಲೈಮಾಕ್ಸ್ ಬಗ್ಗೆ ಯಾವುದೇ ಆಸಕ್ತಿದಾಯಕ ವಿಚಾರವಿಲ್ಲ.ಈ ಸಿನಿಮಾ ಜನರ ಬುದ್ಧಿವಂತಿಕೆಯನ್ನು ಅಪಹಾಸ್ಯ ಮಾಡಿದಂತೆ ಆಗಿದೆ’. ಎಂದು ಹಗುರವಾಗಿ ಟೀಕಿದ್ದಾರೆ.
‘ಈ ಸಿನಿಮಾದ ಮೂಲಕ ದೈವವಿದೆ ಹಾಗೂ ನಮ್ಮ ಜೀವನದಲ್ಲಿ ಅದರ ಪಾತ್ರವಿದೆ ಎಂದು ಜನರು ಬಲವಾಗಿ ನಂಬುವಂತೆ ಮಾಡುತ್ತದೆ. ವಿಶೇಷವಾಗಿ ಭಾರತ ತಮ್ಮ ಹಿಂದಿನ ಪುರಾಣ, ಪೌರಾಣಿಕ ಪಾತ್ರಗಳು ಇದ್ದವು ಎಂದು ವೈಜ್ಞಾನಿಕವಾಗಿ ನಿರೂಪಿಸಲು ಪ್ರಯತ್ನಿಸುತ್ತಿರುವಾಗ ಇಂಥ ಸಿನಿಮಾ ಇಲ್ಲಿ ಸರಿ ಹೊಂದುತ್ತದೆಯೇ’ ಎಂದು ವ್ಯಂಗ್ಯ ಮಾಡಿದ್ದಾರೆ.
‘ಕಾಂತಾರ’ ಚಿತ್ರವನ್ನು ಥಿಯೇಟರ್ನಲ್ಲಿ ನೋಡಿದ ಬಳಿಕ ಅಭಿರೂಪ್ ಬಸು ಅವರು ಈ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ಈ ಪೋಸ್ಟ್‌ಗೆ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದು, ಅವರ ಈ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ‘ವರಾಹ ರೂಪಂ..’ ಹಾಡಿನ ಬಗ್ಗೆಯೂ ಅನೇಕಕರು ಇದು ಮಲಯಾಳಂನ ‘ನವರಸಂ..’ ಗೀತೆಯ ಟ್ಯೂನ್ ಅನ್ನು ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಕದ್ದಿದ್ದಾರೆ ಎಂದು ಆರೋಪ ಮಾಡಿತ್ತು. ವರಾಹ ರೂಪಂ ಹಾಡಿನ ಸಂಬಂಧ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ, ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ. ಈ ವಿಚಾರವನ್ನು ‘ತೈಕ್ಕುಡಂ ಬ್ರಿಡ್ಜ್’ ಚಿತ್ರತಂಡವೇ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ.