‘XXX’ ಸೀಸನ್ 2 ವೆಬ್ ಸಿರೀಸ್ ನಲ್ಲಿ ಸೈನ್ಯಕ್ಕೆ ಅವಮಾನ – ಏಕ್ತಾ ಕಪೂರ್’ಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ನ್ಯೂಸ್ ಆ್ಯರೋ : ಕಿರುತೆರೆ ನಟಿ ಏಕ್ತಾ ಕಪೂರ್ ತನ್ನ ವೆಬ್ ಸಿರೀಸ್ ‘XXX’ ಸೀಸನ್ 2 ಗೆ ಸಂಬಂಧಿಸಿ ವಿವಾದದ ಸುಳಿಗೆ ಸಿಲುಕಿದ್ದಾರೆ. ಈಗ ಏಕ್ತಾ ಕಪೂರ್’ಗೆ ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ. ಏಕ್ತಾ ಕಪೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನೀವು ಯುವ ಪೀಳಿಗೆಯ ತಲೆ ಹಾಳು ಮಾಡುತ್ತಿರುವಿರಿ ಎಂದು ತರಾಟೆಗೆ ತೆಗೆದುಕೊಂಡಿದೆ.

ಏಕ್ತಾ ಕಪೂರ್ ಅವರ ಟ್ರಿಪಲ್ ಎಕ್ಸ್ ವೆಬ್ ಸರಣಿಯ ಸೀಸನ್ 2ರಲ್ಲಿ ಅನೇಕ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ದೇಶದ ಸೈನಿಕರ ಪತ್ನಿ ಸೈನಿಕನ ಸಮವಸ್ತ್ರದಲ್ಲಿ ಇತರ ಜನರೊಂದಿಗೆ ದೈಹಿಕ ಸಂಬಂಧ ಹೊಂದುವುದನ್ನು ತೋರಿಸಲಾಗಿತ್ತು. ಇದನ್ನು ವಿರೋಧಿಸಿ ಏಕ್ತಾ ಕಪೂರ್ ಹಾಗೂ ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಭಾರತೀಯ ಸೇನೆಯ ಯೋಧರೊಬ್ಬರು ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಹಾರದ ಬೇಗುಸರಾಯ್‌ನಲ್ಲಿರುವ ಸ್ಥಳೀಯ ನ್ಯಾಯಾಲಯವು ಏಕ್ತಾ ಮತ್ತು ಆಕೆಯ ತಾಯಿಯನ್ನು ಬಂಧಿಸಲು ಆದೇಶಿಸಿತ್ತು. ಬಂಧನದ ವಾರಂಟ್ ಕೂಡ ಜಾರಿ ಮಾಡಲಾಗಿತ್ತು.
ಏಕ್ತಾ ಕಪೂರ್ ಬಂಧನ ವಾರಂಟ್ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರಿದ್ದ ಪೀಠ ಏಕ್ತಾ ಕಪೂರ್’ಗೆ ಛೀಮಾರಿ ಹಾಕಿದೆ. ನೀವು ಯುವಜನರಿಗೆ ಯಾವ ಸಂದೇಶವನ್ನು ಕೊಡುತ್ತಿದ್ದೀರಿ? ಅಂತಹ ಆಕ್ಷೇಪಾರ್ಹ ದೃಶ್ಯಗಳನ್ನು ಓಟಿಟಿಯಲ್ಲಿ ತೋರಿಸಿ ಯುವ ಪೀಳಿಗೆಯ ಮನಸ್ಸನ್ನು ಹಾಳುಮಾಡುತ್ತಿರುವಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಏಕ್ತಾ ಕಪೂರ್ ಪರ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅಲ್ಲಿ ಬೇಗ ವಿಚಾರಣೆ ನಡೆಸುವ ಭರವಸೆ ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಬೇಕಾಯಿತು ಎಂದಿದ್ದಾರೆ. ಆದ್ರೆ ಹೈಕೋರ್ಟ್’ನಲ್ಲಿ ವಿಚಾರಣೆ ಆಗದೆ ಸುಪ್ರಿಂ ಮೆಟ್ಟಿಲೇರಿದ್ದಕ್ಕೆ, ನ್ಯಾಯಮೂರ್ತಿ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರ ಪೀಠವು ರೋಹ್ಟಗಿ ಅವರನ್ನೂ ತರಾಟೆಗೆ ತೆಗೆದುಕೊಂಡಿದೆ.