ಬಿಂದಾಸ್ ಹುಡುಗಿ ಮದುವೆ ಫಿಕ್ಸ್ – ಉದ್ಯಮಿ ಕೈ ಹಿಡಿಯಲಿದ್ದಾರೆ ಹನ್ಸಿಕಾ ಮೋಟ್ವಾನಿ

ನ್ಯೂಸ್ ಆ್ಯರೋ : ಬಿಂದಾಸ್ ಹುಡುಗಿ ಹನ್ಸಿಕಾ ಮೋಟ್ವಾನಿ ಕಲ್ಯಾಣಕ್ಕೆ ಕಾಲ ಕೂಡಿ ಮಂದಿದೆ. ಡೆಸ್ಟಿನೇಷನ್ ವೆಡ್ಡಿಂಗ್ ಡೇಟ್ ಹಾಗೂ ಸ್ಥಳ ಕೂಡ ನಿಗದಿಯಾಗಿದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಹನ್ಸಿಕಾ ನಾಯಕಿಯಾಗಿ ಬಹುಭಾಷಾ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಹೆಸರು ಮಾಡಿರುವ ಹನ್ಸಿಕಾ ಮದುವೆಯ ಶುಭವಾರ್ತೆ ಸಿಕ್ಕಿದೆ.

ನಟಿ ಹನ್ಸಿಕಾ ಇದೇ ಡಿಸೆಂಬರ್’ನಲ್ಲಿ ಖ್ಯಾತ ರಾಜಕೀಯ ಮುಖಂಡರ ಪುತ್ರನ ಕೈ ಹಿಡಿಯಲಿದ್ದಾರೆ. ಆತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಹನ್ಸಿಕಾ ಕಲ್ಯಾಣೋತ್ಸವಕ್ಕೆ ಜೈಪುರದ ಮುಂಡೋತ ಪ್ಯಾಲೇಸ್ ಬುಕ್ ಮಾಡಲಾಗಿದೆಯಂತೆ. ಈ ಮದುವೆ ಸಮಾರಂಭದಲ್ಲಿ ಟಾಲಿವುಡ್, ಕಾಲಿವುಡ್ ಚಿತ್ರೋದ್ಯಮದ ಗಣ್ಯರು ಹಾಗೂ ಆಪ್ತರು ಭಾಗವಹಿಸಲಿದ್ದು, ಬಹಳ ಅದ್ಧೂರಿಯಾಗಿ ವಿವಾಹ ನಡೆಯಲಿದೆ ಎನ್ನಲಾಗಿದೆ.
ಹನ್ಸಿಕಾ ಮೋಟ್ವಾನಿ ಕನ್ನಡಿಗರಿಗೂ ಪರಿಚಿತರು. ಪುನೀತ್ ರಾಜ್ ಕುಮಾರ್ ಅವರ ‘ಬಿಂದಾಸ್’ ಚಿತ್ರದಲ್ಲಿ ಹನ್ಸಿಕಾ ಸ್ಕ್ರೀನ್ ಶೇರ್ ಮಾಡಿದ್ದರು. ಮುಂಬೈನಲ್ಲಿ ಹುಟ್ಟಿ ಬೆಳೆದ ಹನ್ಸಿಕಾ ಮೋಟ್ವಾನಿ ಸಿಂಧಿ ಕುಟುಂಬಕ್ಕೆ ಸೇರಿದವರು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಶಕಲಕ ಬೂಮ್ ಬೂಮ್’ ಧಾರಾವಾಹಿ ಮೂಲಕ ಹನ್ಸಿಕಾ ನಟನೆ ಪ್ರಾರಂಭಿಸಿದರು.

ಹೃತಿಕ್ ರೋಷನ್ ಹಾಗೂ ಪ್ರೀತಿ ಝಿಂಟಾ ಅಭಿನಯದ ‘ಕೋಯಿ ಮಿಲ್ ಗಯಾ’ ಸಿನಿಮಾದಲ್ಲಿ ಹನ್ಸಿಕಾ ಬಾಲನಟಿಯಾಗಿ ಅಭಿನಯಿಸಿದ್ದರು. ಹವಾ, ಅಬ್ರಕ ಡಬ್ರಾ, ಜಾಗೋ, ಹಮ್ ಕೌನ್ ಹೈ ಚಿತ್ರಗಳಲ್ಲಿಯೂ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದರು.
2007ರಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ‘ದೇಶಮುದುರು’ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ ಹನ್ಸಿಕಾಗೆ ಮೊದಲ ಚಿತ್ರದಲ್ಲೇ ‘ಫಿಲ್ಮ್ ಫೇರ್ ಬೆಸ್ಟ್ ಫೀಮೇಲ್ ಡೆಬ್ಯೂ ಪ್ರಶಸ್ತಿ’ ಸಿಕ್ಕಿತ್ತು. ಮುಂದೆ ತಮಿಳು, ತೆಲುಗು, ಹಿಂದಿ, ಕನ್ನಡ , ಮಲಯಾಳಂ ಭಾಷೆಗಳ ಬಹುತೇಕ ಸ್ಟಾರ್ ನಟರ ಜೊತೆ ಹನ್ಸಿಕಾ ಅಭಿನಯಿಸಿದ್ದರು.

ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಹಾಯ ಮಾಡುವ ಮೂಲಕ ಸಮಾಜ ಸೇವಕಿಯಾಗಿಯೂ ಗುರುತಿಸಿಕೊಂಡಿರುವ ಹನ್ಸಿಕಾ ಬ್ರೆಸ್ಟ್ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ರಾಯಭಾರಿಯೂ ಆಗಿದ್ದಾರೆ. ಸದ್ಯ ಹನ್ಸಿಕಾ ಮೋಟ್ವಾನಿ ಹಸೆಮನೆ ಏರಲು ರೆಡಿಯಾಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.