1. Home
  2. Entertainment
  3. ತಾರಕಕ್ಕೇರಿದ ಹೆಡ್ ಬುಷ್ ಸಿನಿಮಾ ವಿವಾದ‌ – ಸಿನಿಮಾದಲ್ಲಿ ಕರಗಕ್ಕೆ ಅವಮಾನ ಆರೋಪ, ತಿರುಗಿಬಿದ್ದ ಅಗ್ನಿ ಶ್ರೀಧರ್

ತಾರಕಕ್ಕೇರಿದ ಹೆಡ್ ಬುಷ್ ಸಿನಿಮಾ ವಿವಾದ‌ – ಸಿನಿಮಾದಲ್ಲಿ ಕರಗಕ್ಕೆ ಅವಮಾನ ಆರೋಪ, ತಿರುಗಿಬಿದ್ದ ಅಗ್ನಿ ಶ್ರೀಧರ್

ತಾರಕಕ್ಕೇರಿದ ಹೆಡ್ ಬುಷ್ ಸಿನಿಮಾ ವಿವಾದ‌ – ಸಿನಿಮಾದಲ್ಲಿ ಕರಗಕ್ಕೆ ಅವಮಾನ ಆರೋಪ, ತಿರುಗಿಬಿದ್ದ ಅಗ್ನಿ ಶ್ರೀಧರ್
0

ನ್ಯೂಸ್ ಆ್ಯರೋ : ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಮತ್ತು ಕರಗಕ್ಕೆ ಅವಮಾನ ಮಾಡಲಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಧನಂಜಯ್ ವಿವರಣೆ ನೀಡಿದ್ದಾರೆ. ಆದರೂ ಕೂಡ ಚಿತ್ರತಂಡದ ವಿರುದ್ಧ ವಿರೋಧ ಕೇಳಿಬರುತ್ತಿದೆ. ಆ ದೃಶ್ಯಗಳನ್ನು ಕತ್ತರಿಸಿ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ.

ಹೆಡ್ ಬುಷ್ ಚಿತ್ರದಲ್ಲಿ ಬೆಂಗಳೂರಿನ ಐತಿಹಾಸಿಕ ಕರಗ’ಕ್ಕೆ ಅಪಮಾನ ಮಾಡಲಾಗಿದೆ ಎಂದು ಕರಗ ಸಮಿತಿಯ ಅಧ್ಯಕ್ಷ ಸತೀಶ್ ಆರೋಪಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸಾಂಪ್ರದಾಯಿಕ ಕಲೆ ವೀರಗಾಸೆಗೆ ಕೂಡ ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೆಡ್ ಬುಷ್ ಚಿತ್ರತಂಡದ ಮೇಲೆ ಕರಗ ಸಮಿತಿ ಕಿಡಿ

ಚಿತ್ರದಲ್ಲಿ ಬೆಂಗಳೂರು ಕರಗವನ್ನು ತೋರಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಕರಗ ಸಮಿತಿಯ ಅಧ್ಯಕ್ಷ ಸತೀಶ್, ಹೆಡ್ ಬುಷ್ ಚಿತ್ರದಲ್ಲಿ ನಮ್ಮ ಐತಿಹಾಸಿಕ ಕರಗಕ್ಕೆ ಅವಮಾನ ಮಾಡಲಾಗಿದೆ. ಮೊದಲಿಗೆ ಸಿನಿಮಾ ನೋಡಿದ್ದ ನಮ್ಮ ಆಪ್ತರು ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ದೀಪಾವಳಿ ಪ್ರಯುಕ್ತ ದೇವಸ್ತಾನದ ಪೂಜೆ ಮತ್ತು ಆಚರಣೆಗಳಲ್ಲಿ ತೊಡಗಿಕೊಂಡಿದ್ದ ಕಾರಣ ಚಿತ್ರವನ್ನು ನೋಡಲು ಆಗಿರಲಿಲ್ಲ, ಬಿಡುವು ಮಾಡಿಕೊಂಡು ಚಿತ್ರ ವೀಕ್ಷಿಸಿದೆ. ಸಿನಿಮಾದಲ್ಲಿ ಕರಗವನ್ನು ಜುಜುಬಿ ಎಂದು ಕರೆದಿದ್ದಾರೆ.

18 ವರ್ಷಗಳ ಕಾಲ ಕರಗ ಹೊತ್ತು ದೇವಿಗೆ ಸೇವೆ ಸಲ್ಲಿಸಿದ್ದ ಶಿವಶಂಕರ್ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಕರಗದ ಗಾಂಭೀರ್ಯತೆಯನ್ನೇ ಹಾಳು ಮಾಡಿದ್ದಾರೆ. ಚಿತ್ರದಲ್ಲಿನ ಕರಗದ ದೃಶ್ಯಗಳನ್ನು ತೆಗೆದು ಹಾಕುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಿದ್ದೇವೆ” ಎಂದಿದ್ದಾರೆ.

ಹೆಡ್ ಬುಷ್ ನಿಷೇಧಕ್ಕೆ ಆಗ್ರಹ

ಕರಗ ಆಚರಣೆಯ ಸಂದರ್ಭದಲ್ಲಿ ಬರುವ ಸಾಂಪ್ರದಾಯಿಕ ಕಲೆ ವೀರಗಾಸೆಯನ್ನು ತೋರಿಸಿರುವ ಬಗ್ಗೆ ಕೂಡ ಅಸಮಾಧಾನ ವ್ಯಕ್ತವಾಗಿದೆ. ಕರಗ ಆಚರಣೆ ಮತ್ತು ವೀರಗಾಸೆ ಕುಣಿತದ ಸಮಯದಲ್ಲೇ ಜಯರಾಜ್ ಮೇಲೆ ದಾಳಿಯಾಗುತ್ತದೆ, ವೀರಗಾಸೆ ವೇಷ ತೊಟ್ಟವರೆ ಆತನ ಮೇಲೆ ದಾಳಿ ಮಾಡುತ್ತಾರೆ ಎಂಬಂತೆ ತೋರಿಸಲಾಗಿದೆ. ವೀರಗಾಸೆ ವೇಷದಾರಿಗಳನ್ನು ಬೂಟು ಕಾಲಿನಲ್ಲಿ ಒದೆಯುವ ಮನಬಂದಂತೆ ಥಳಿಸುವ ಸನ್ನಿವೇಶಗಳು ಕೂಡ ಚಿತ್ರದಲ್ಲಿದೆ. ಹೆಡ್ ಬುಷ್ ಚಿತ್ರತಂಡ ವಿರಭದ್ರೇಶ್ವರನಿಗೆ ಅವಮಾನ ಮಾಡಿದೆ. ವೀರಗಾಸೆಯ ಹಿನ್ನೆಲೆ ತಿಳಿಯದ, ಐತಿಹಾಸಿಕ ಕಲೆಗೆ ಅಪಮಾನ ಮಾಡಿರುವ ಚಿತ್ರವನ್ನು ನಿಷೇಧಿಸಿ” ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟ ಧನಂಜಯ ಹೇಳಿದ್ದೇನು..?

ಕರಗ ಮತ್ತು ವೀರಗಾಸೆ ಎರಡಕ್ಕೂ ಚಿತ್ರದಲ್ಲಿ ಅಪಮಾನ ಮಾಡಲಾಗಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಚಿತ್ರದ ನಾಯಕ ನಟ, ನಿರ್ಮಾಪಕ ಧನಂಜಯ, “ನಾನು ವೀರಭದ್ರಸ್ವಾಮಿಯ ಭಕ್ತ ನಮ್ಮ ಚಿತ್ರದಲ್ಲಿ ವೀರಗಾಸೆಗೆ ಎಲ್ಲಿಯೂ ಅವಮಾನ ಮಾಡಿಲ್ಲ. ಅಸಲಿ ವೀರಗಾಸೆ ಕಲಾವಿದರಿಗೂ, ಕಲಾವಿದರ ವೇಷ ತೊಟ್ಟು ಜಯರಾಜ್ ಮೇಲೆ ದಾಳಿ ಮಾಡುವ ದುಷ್ಕರ್ಮಿಗಳಿಗೂ ಸ್ಪಷ್ಟ ವ್ಯತ್ಯಾಸಗಳನ್ನು ತೋರಿಸಿದ್ದೇವೆ. ಕರಗವನ್ನು ಕೂಡ ತುಂಬಾ ಭಕ್ತಿಯಿಂದ ಚಿತ್ರಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಬೆಂಗಳೂರು ಕರಗವನ್ನು ವಿಜೃಂಭಣೆಯಿಂದ ತೋರಿಸುವ ಸಲುವಾಗಿ ಸಾಕಷ್ಟು ಶ್ರಮ ವಹಿಸಿದ್ದೇವೆ. ಬೇಕಂತಲೇ ನನ್ನನ್ನು ಗುರಿಯಾಗಿಸಿ ಈ ದಾಳಿಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ.

“ನಾನು ಚಿತ್ರರಂಗ ಮತ್ತು ಕರ್ನಾಟಕದಲ್ಲಿ ಇರುವುದೇ ಇವರುಗಳಿಗೆ ಇಷ್ಟವಿಲ್ಲ ಎಂಬಂತೆ ಕಾಣುತ್ತಿದೆ. ಕರಗ ಮತ್ತು ವೀರಗಾಸೆಯ ಬಗ್ಗೆ ಅದಕ್ಕೆ ಸಂಬಂಧಪಟ್ಟ ಹಿರಿಯರು ಮಾತನಾಡುತ್ತಿರುವುದು ಸ್ವಾಗತಾರ್ಹ. ಆದರೆ, ಜೈಲಿಗೆ ಹೋಗಿಬಂದ ಕಿಡಿಗೇಡಿಗಳೆಲ್ಲ ನಮ್ಮ ಚಿತ್ರದ ಬಗ್ಗೆ ಮಾತನಾಡ ತೊಡಗಿದ್ದಾರೆ. ಸಂಬಧ ಪಟ್ಟವರಿಗೆ ಆಕ್ಷೇಪಗಳಿದ್ದರೆ ಚಿತ್ರಕಥೆ ಬರೆದ ಅಗ್ನಿ ಶ್ರೀಧರ್ ಮತ್ತು ನಿರ್ದೇಶಕ ಶೂನ್ಯ ಅವರ ಬಳಿ ಮಾತನಾಡಲಿ, ಯಾರ ಭಾವನೆಗೂ ಧಕ್ಕೆಯುಂಟು ಮಾಡುವ ಉದ್ದೇಶ ನಮಗಿಲ್ಲ” ಎಂದು ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.

ಅಗ್ನಿ ಶ್ರೀಧರ್ ಪ್ರತಿಕ್ರಿಯೆ

“ಚಿತ್ರದಲ್ಲಿ ಕರಗವನ್ನು ಚಿತ್ರಿಸಿದ ರೀತಿಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಹಿರಿಯರು ಕೂಡ ಈ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ಜುಜುಬಿ ಕರಗ ಎಂಬ ಸಂಭಾಷಣೆಯೊಂದು ಇಲ್ಲದಿದ್ದರೆ ಕರಗದ ಮಹತ್ವ ಇನ್ನಷ್ಟು ಗೌರವಯುತವಾಗಿ ಇರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನನಗೂ ಕೂಡ ಆ ಬಗ್ಗೆ ಕೊರಗಿದೆ. ಆದರೆ, ಆ ದಿನಗಳಲ್ಲಿ ಜಯರಾಜ್ ಜೊತೆಗಿದ್ದ ಸ್ಯಾಮ್ ಸನ್ ರೀತಿಯ ವ್ಯಕ್ತಿಗಳು ಮಾತನಾಡುತ್ತಿದ್ದುದ್ದೇ ಹಾಗೆ ನಾನು ಅದೆಲ್ಲವನ್ನು ಕಣ್ಣಾರೆ ಕಂಡವನು. ಹೀಗಾಗಿ ಅದೇ ಮಾತುಗಳನ್ನು ಸಂಭಾಷಣೆಯಾಗಿ ಬಳಸಿಕೊಂಡಿದ್ದೇವೆ” ಎಂದಿದ್ದಾರೆ.

“ನಿರ್ದಿಷ್ಟ ಸಂಭಾಷಣೆಯ ಬಗ್ಗೆ ಕೇಳಿ ಬರುತ್ತಿರುವ ಆಕ್ಷೇಪಗಳಿಗೆ ನಾನು ಉತ್ತರದಾಯಿ. ಇದೇ ನೆಪದಲ್ಲಿ ಹಿಂದೂ ಸಂಘಟನೆಯವರು ಈ ಚಿತ್ರ ಸರಿ ಇಲ್ಲ ಬ್ಯಾನ್ ಮಾಡಿ ಅಂತೆಲ್ಲ ಬೆದರಿಕೆ ಹಾಕಲು ಬಂದರೆ, ಅಂತಹ ಗೊಡ್ಡು ಬೆದರಿಕೆಗಳಿಗೆ ಹಿಂಜರಿಯುವ ವ್ಯಕ್ತಿ ನಾನಲ್ಲ ಬೇಕಿದ್ದರೆ ಮುಕ್ತ ಸಂವಾದ ನಡೆಸೋಣ. ಆಕ್ಷೇಪಾರ್ಹ ಸಂಭಾಷಣೆಯನ್ನು ಚಿತ್ರದಿಂದ ತೆಗೆದು ಹಾಕುವ ಬಗ್ಗೆ ತಂಡದ ಜೊತೆ ಚರ್ಚೆ ನಡೆಸುತ್ತೇನೆ’ ಎಂದಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..