ರಿಷಭ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ಆ್ಯಂಕರ್ – ವಿಡಿಯೋ ವೈರಲ್, ಕನ್ನಡಿಗರು ಫುಲ್ ಖುಷ್

ನ್ಯೂಸ್ ಆ್ಯರೋ : ರಿಷಭ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ಕನ್ನಡ ಸಿನಿರಂಗದಲ್ಲಿ ಹೊಸ ಭಾಷ್ಯ ಬರೆದಿದೆ. ತುಳುನಾಡ ಸಂಸ್ಕೃತಿಯನ್ನು ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವ ಕಾಂತಾರ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. ಹೊಂಬಾಳೆ ಬ್ಯಾನರ್’ನಡಿ ನಿರ್ಮಾಣವಾದ ಕನ್ನಡ ಸಿನಿಮಾದ ಹಿಂದಿ ವರ್ಷನ್ ಇಂದು ರಿಲೀಸ್ ಆಗಿದ್ದು, ಉತ್ತರ ಭಾರತದಲ್ಲೂ ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಹಿಂದಿ ಆ್ಯಂಕರ್ ರಿಷಭ್ ಕಾಲಿಗೆ ಬಿದ್ದು ನಮಸ್ಕರಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಹಿಂದಿಯಲ್ಲಿ ಇಂದಿನಿಂದ ಕಾಂತಾರ ಅಬ್ಬರ ಶುರುವಾಗಿದೆ. ಕನ್ನಡದಲ್ಲಷ್ಟೇ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾವನ್ನು ಬೇಡಿಕೆ ಮೇರೆಗೆ ಚಿತ್ರತಂಡ ಹಿಂದಿ, ತೆಲುಗು, ಮಲಯಾಲಂ ಭಾಷೆಗಳಿಗೂ ಡಬ್ ಮಾಡಲು ನಿರ್ಧರಿಸಿತ್ತು. ಅದರಂತೆ ಇಂದು ದೇಶಾದ್ಯಂತ ಕಾಂತಾರ ಹಿಂದಿಯಲ್ಲಿ ಬಿಡುಗಡೆಯಾಗಿದ್ದು, ಮುಂಬೈನಲ್ಲಿ ಸಿನಿತಂಡ ಪ್ರಚಾರದಲ್ಲಿ ತೊಡಗಿಕೊಂಡಿದೆ. ಹಲವಾರು ಹಿಂದಿ ಟಿವಿ, ಯೂಟ್ಯೂಬ್ ಚಾನೆಲ್’ಗಳಿಗೆ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಸಂದರ್ಶನ ನೀಡುತ್ತಿದ್ದಾರೆ. ಈ ಮಧ್ಯೆ ಸಂದರ್ಶನದ ನಡುವೆ ಆ್ಯಂಕರ್ ಒಬ್ಬ ರಿಷಬ್ ಕಾಲಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.
ಹಿಂದಿಯ ಖ್ಯಾತ ಯೂಟ್ಯೂಬರ್ ಸೂರಜ್ ಕುಮಾರ್ ಸಂದರ್ಶನದ ಮಧ್ಯೆ ರಿಷಭ್ ರನ್ನು ಎದ್ದು ನಿಲ್ಲುವಂತೆ ಹೇಳುತ್ತಾರೆ. ಬಳಿಕ ಅವರನ್ನು ತಬ್ಬಿಕೊಂಡು, ಏಕಾಏಕಿ ರಿಷಬ್ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಇದನ್ನು ನಿರೀಕ್ಷೆ ಮಾಡಿರದ ರಿಷಬ್ ತಬ್ಬಿಬ್ಬಾಗುತ್ತಾರೆ, ಹಾಗೆಲ್ಲ ಮಾಡಬಾರದು ಅಂತ ಸಮಾಧಾನಪಡಿಸಿದ್ದಾರೆ.
“ನೀವು ಎಂತಹ ಸಿನಿಮಾ ಮಾಡಿದ್ದೀರಿ ಸರ್. ನಾನು ಈ ರೀತಿ ಯಾರ ಪಾದ ಮುಟ್ಟಿ ನಮಸ್ಕರಿಸಿದವನಲ್ಲ. ಆದ್ರೆ ಕಾಂತಾರದಲ್ಲಿ ನಿಮ್ಮ ಅಭಿನಯ ನೋಡಿ ನನಗೆ ಮಾತೇ ಬರುತ್ತಿಲ್ಲ. ನಿಜವಾಗಿಯೂ ನೀವು ದೇವರಂತೆ ಕಾಣುತ್ತೀರಿ. ನೀವು ನನ್ನ ಗೆಳತಿಗಿಂತಲೂ ಹೆಚ್ಚು ಇಷ್ಟವಾಗಿದ್ದೀರಿ’’ ಎಂದು ಹೇಳುತ್ತಾ ಯೂಟ್ಯೂಬರ್ ಭಾವುಕರಾಗಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಖುಷಿಯಾಗಿದ್ದಾರೆ. ಕನ್ನಡ ಸಿನಿಮಾವನ್ನು ನೆಕ್ಸ್ಟ್ ಲೆವಲ್’ಗೆ ಕೊಂಡೊಯ್ಯುತ್ತಿರುವ ರಿಷಬ್ ಶೆಟ್ಟಿಗೆ ಧನ್ಯವಾದ ತಿಳಿಸಿದ್ದಾರೆ.
ಯೂಟ್ಯೂಬರ್ ಸೂರಜ್ ಕುಮಾರ್ ಸಿನಿಮಾ ವಿಮರ್ಶೆ, ಸೆಲಬ್ರಿಟಿಗಳ ಸಂದರ್ಶನದಿಂದ ಜನಪ್ರಿಯ. ಈ ಹಿಂದೆ ಕೆಜಿಎಫ್ ಸಿನಿಮಾದ ವೇಳೆ ಯಶ್ ಹಾಗೂ ವಿಕ್ರಾಂತ್ ರೋಣದ ವೇಳೆ ಸುದೀಪ್ ಸಂದರ್ಶನ ನಡೆಸಿದ್ದರು. ಇನ್ನು ಕಾಂತಾರ ಸಿನಿಮಾದ ಹಿಂದಿ ವರ್ಷನ್’ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಬಾಲಿವುಡ್’ನ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಕಾಂತಾರಗೆ 4 ಸ್ಟಾರ್ ಕೊಟ್ಟಿದ್ದು, ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಎಂಥಹ ಸಿನಿಮಾವಾದರೂ 3ರಿಂದ ಮೂರೂವರೆ ಸ್ಟಾರ್ ರೇಟಿಂಗ್ ಕೊಡುವ ಅವರು ಕಾಂತಾರಕ್ಕೆ 4 ಸ್ಟಾರ್ ಕೊಟ್ಟಿರುವುದು ವಿಶೇಷ. ಬುಕ್ ಮೈ ಶೋನಲ್ಲಿ 99% ರೇಟಿಂಗ್ ಪಡೆದಿರುವ ಕಾಂತಾರ ನೂರು ಕೋಟಿ ಕ್ಲಬ್ ಸೇರಲು ದಾಪುಗಾಲಿಟ್ಟಿದೆ.