300 ಕೋಟಿಯತ್ತ ದಾಪುಗಾಲಿಟ್ಟ ಕಾಂತಾರ – ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಹೊಂಬಾಳೆ ಫಿಲಮ್ಸ್ ಟ್ವೀಟ್…!! ಏನದು ಗೊತ್ತಾ..!?

ನ್ಯೂಸ್ ಆ್ಯರೋ : ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಪರಭಾಷೆಗಳಿಂದಲೂ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ, ಎಲ್ಲರೂ ಚಿತ್ರವನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಒಮ್ಮೆ ಸಿನಿಮಾ ನೋಡಿದವರು ಮರಳಿ ಮರಳಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದರಿಂದ ಸದ್ಯಕ್ಕಂತೂ ‘ಕಾಂತಾರ’ (Kantara Movie) ಕಲೆಕ್ಷನ್ ಕುಗ್ಗುವ ಸೂಚನೆ ಸಿಗುತ್ತಿಲ್ಲ.
ಚಿತ್ರ ತೆರೆಕಂಡು ತಿಂಗಳು ಕಳೆದಿದ್ದರೂ ಕಲೆಕ್ಷನ್ ಮತ್ತಷ್ಟು ಹೆಚ್ಚುತ್ತಲೇ ಇದೆ. ಹೀಗಾಗಿ, ಸಿನಿಮಾ ಅನಾಯಾಸವಾಗಿ 300 ಕೋಟಿ ರೂ. ಕ್ಲಬ್ ಸೇರಲಿದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ.
ಈಗಾಗಲೇ ‘ಕಾಂತಾರ’ ಚಿತ್ರ 200 ಕೋಟಿ ರೂಪಾಯಿ ಗಳಿಕೆ ಮಾಡಿ 300 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಸನಿಹದಲ್ಲಿದೆ. ಹಾಗಂತ ಈ ಚಿತ್ರ ನಿರ್ಮಾಣ ಮಾಡುವಾಗ ನೂರು ಕೋಟಿ ಬಂಡವಾಳ ಹೂಡಿಲ್ಲ. 16-17 ಕೋಟಿ ರೂಪಾಯಿ ಆಸುಪಾಸಿನಲ್ಲಿ ನಿರ್ಮಾಣವಾದ ಈ ಚಿತ್ರ ಈಗ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡುತ್ತಿದೆ.
ಹಿಂದಿಯಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಯಶಸ್ಸು ಪಡೆಯುತ್ತಿಲ್ಲ. ರಶ್ಮಿಕಾ ಮಂದಣ್ಣ ಹಾಗೂ ಅಮಿತಾಭ್ ಬಚ್ಚನ್ ನಟನೆಯ ‘ಗುಡ್ಬೈ’ ಸಿನಿಮಾ ರಿಲೀಸ್ ಆಗಿ ಫ್ಲಾಪ್ ಆಯಿತು. ಆಯುಷ್ಮಾನ್ ಖುರಾನ ನಟನೆಯ ‘ಡಾಕ್ಟರ್ ಜಿ’ ಸಿನಿಮಾ ಕೂಡ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿಲ್ಲ. ಆದರೆ, ಹಿಂದಿಗೆ ಡಬ್ ಆಗಿ ತೆರೆಕಂಡ ‘ಕಾಂತಾರ’ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಮಾಯಿ ಮಾಡುತ್ತಿದೆ.
ತೆಲುಗಿನಲ್ಲೂ ‘ಕಾಂತಾರ’ ಚಿತ್ರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಅನೇಕರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಸಿನಿಮಾ ಹಂಚಿಕೆ ಜವಾಬ್ದಾರಿ ತೆಗೆದುಕೊಂಡು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಒಳ್ಳೆಯ ಲಾಭ ಕಂಡಿದ್ದಾರೆ. ತೆಲುಗಿನಲ್ಲಿ ಈಗಾಗಲೇ ಚಿತ್ರದ ಕಲೆಕ್ಷನ್ ಎರಡಂಕಿ ಮುಟ್ಟಿದೆ. ಅವರು ಮೂರು ಕೋಟಿ ರೂ.ಗೆ ಸಿನಿಮಾ ಹಂಚಿಕೆ ಜವಾಬ್ದಾರಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ತೆರೆ ಕಂಡ 28 ದಿನಗಳಲ್ಲಿಯೇ ರಾಜ್ಯ ಸೇರಿದಂತೆ ದೇಶಾದ್ಯಂತ 201 ಕೋಟಿಗೂ ಅಧಿಕ ಹಣವನ್ನು ಈ ಚಿತ್ರ ಕಲೆಕ್ಷನ್ ಮಾಡಿದ್ದು, ವಿದೇಶಗಳಲ್ಲಿ 49 ಕೋಟಿ ಗಳಿಸಿದೆ. ಈ ವಾರದ ಒಳಗೆ ಆರಾಮದಾಯಕವಾಗಿ ಕಾಂತಾರ ಸಿನಿಮಾ 300 ಕೋಟಿ ಕ್ಲಬ್ ಸೇರಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರವಾಗಿದ್ದು, ಕೆಜಿಎಫ್-2 ರಾಜ್ಯದಲ್ಲಿ ಹೆಚ್ಚು ಹಣ ಗಳಿಕೆ ಕಂಡರೆ, ಕಾಂತಾರ ಸಿನಿಮಾ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿರುವ ಸಿನಿಮಾ ಎಂಬ ಹೆಸರನ್ನು ಪಡೆದಿದೆ. ಅಕ್ಟೋಬರ್ 24ರ ಹೊತ್ತಿಗೆ ಕಾಂತಾರ ಸಿನಿಮಾ ಕರ್ನಾಟಕವೊಂದರಲ್ಲೇ 77 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ವರದಿ ಆಗಿದೆ.
ಇನ್ನೂ ಕನ್ನಡದಲ್ಲಿ ಈವರೆಗೆ ಕೆಜಿಎಫ್, 777 ಚಾರ್ಲಿ ಬಗ್ಗೆಯೇ ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ತನ್ನ ಛಾಪು ಮೂಡಿಸಿದೆ.
ಹೊಂಬಾಳೆ ಫಿಲಮ್ಸ್ ಸಂಸ್ಥೆ ಈ ಬಗ್ಗೆ ಟ್ವಿಟ್ ಮೂಲಕ “ಈವರೆಗೆ ಹೊಂಬಾಳೆ ಫಿಲಮ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ಕಾಂತಾರ’! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ ಧನ್ಯವಾದ ಕರ್ನಾಟಕ’ ಎಂದು ಹೇಳಿದೆ.