ಕಾಂತಾರ ಒಂದು ದಂತಕಥೆ – ಕರಾವಳಿ ಕಾನನದಲ್ಲಿ ಅವತಾರವೆತ್ತಿದ ರಿಷಬ್ ಶೆಟ್ಟಿ

ನ್ಯೂಸ್ ಆ್ಯರೋ : ಸ್ಯಾಂಡಲ್‌ವುಡ್‌ನಲ್ಲಿ ಕಾಂತಾರ ಸಂಭ್ರಮ ಮನೆ ಮಾಡಿದೆ. ರಿಷಭ್ ಶೆಟ್ಟಿ ಅವತಾರ ನೋಡಿ ಅಭಿಮಾನಿಗಳು ಮಾತ್ರವಲ್ಲ, ಇಡೀ ಚಂದನವನವೇ ನಿಬ್ಬೆರಗಾಗಿದೆ. ಕಿರಿಕ್ ಪಾರ್ಟಿ, ಸ.ಹಿ.ಪ್ರಾ ಶಾಲೆ ಕಾಸರಗೋಡಿನಂತಹ ಸಿನಿಮಾಗಳಲ್ಲಿ ರಿಷಭ್ ನಿರ್ದೇಶಕನಾಗಿಯೂ ಗೆದ್ದಿದ್ದರು. ಆದ್ರೆ ಇಲ್ಲಿ ಗೆಲ್ಲುವುದು ಮಾತ್ರವಲ್ಲ, ವಿಜೃಂಭಿಸಿದ್ದಾರೆ. ಸಿನಿಮಾ ಪೂರ್ತಿ ಕರಾವಳಿ ಸಂಸ್ಕೃತಿ ಮೇಳೈಸಿದ್ದು, ರಿಷಭ್ ಶೆಟ್ಟಿ ಪರ್ಫಾಮೆನ್ಸ್’ಗೆ ಸಿನಿರಸಿಕರು ಸಲಾಮ್ ಹೊಡೆದಿದ್ದಾರೆ.

‘ಕಾಂತಾರ- ಒಂದು ದಂತಕಥೆ’ ಸಿನಿಮಾ ಸ್ಯಾಂಡಲ್‌ವುಡ್ ಅಂಗಳದಲ್ಲಿ ನಿಜವಾಗಿಯೂ ಒಂದು ದಂತಕಥೆಯಾಗಿ ಉಳಿಯಲಿದೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಕಾಂತಾರವು ಕರಾವಳಿಯ ಹೆಮ್ಮೆಯಾಗಿರುವ ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಜೀವಂತಗೊಳಿಸುವ ದೃಶ್ಯ ವೈಭವವಾಗಿದೆ. ಕನ್ನಡ ಸಿನಿರಂಗ ಹಿಂದೆಂದೂ ಕಾಣದ ಸಿನಿಕಥೆಯೊಂದು ತೆರೆ ಮೇಲೆ ಅಬ್ಬರಿಸಿದೆ. ಟ್ರೈಲರ್ ಹಾಗೂ ಹಾಡಿನ ಮೂಲವೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕಾಂತರ ಸಿನಿಮಾ ಇಂದು ಹೊಸ ಮ್ಯಾಜಿಕ್ ಮಾಡಿದೆ. ಸಿನಿ ಪ್ರೇಕ್ಷಕರ ಮೈ-ಮನ ರೋಮಾಂಚನಗೊಳ್ಳುವಂತೆ ಮಾಡಿದೆ.
ಕರಾವಳಿಯ ಕಲಾವಿದ ರಿಷಬ್ ಶೆಟ್ಟಿ ಅಲ್ಲಿನ ಮಣ್ಣಿನ ಕಥೆಯೊಂದನ್ನು ಹೊತ್ತು ತಂದಿದ್ದಾರೆ. ಕಾಂತಾರ ಕರಾವಳಿಯ ಪ್ರಕೃತಿಯ ಮಡಿಲಿನಲ್ಲಿ ಬದುಕು ಕಟ್ಟಿಕೊಂಡಿರುವ ಕಾಡಿನ ಮಕ್ಕಳ ಕಥೆಯನ್ನು ಕಟ್ಟಿಕೊಟ್ಟಿರುವ ಒಂದು ದಂತ ಕಥೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಂಘರ್ಷ ಈ ಸಿನಿಮಾದ ಕಥಾ ಹಂದರ.

ಕರಾವಳಿ ಸಂಸ್ಕೃತಿ, ಜನರ ಧಾರ್ಮಿಕ ನಂಬಿಕೆಗಳು, ದೈವಾರಾಧನೆ, ಕಂಬಳವನ್ನು ತೆರೆಮೇಲೆ ವೈಭವಿಸಿದ್ದಾರೆ. ಅತ್ಯುತ್ತಮ ಕಥೆಗಳನ್ನು ಕಟ್ಟಿಕೊಡುವಲ್ಲಿ ರಿಷಬ್ ನಿಸ್ಸೀಮರು. ಆದ್ರೆ ಕಾಂತಾರ ಸಿನಿಮಾದ ಮೇಕಿಂಗ್’ನಲ್ಲೂ ಗೆದ್ದಿದ್ದಾರೆ. ಸಿನಿಮಾದ ಪ್ರತಿ ಫ್ರೇಮ್ ಅನ್ನು ಸುಂದರಗೊಳಿಸಿದ್ದಾರೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಎಫರ್ಟ್ಸ್ ಸಿನಿಮಾದಲ್ಲಿ ಎದ್ದು ಕಾಣಿಸುತ್ತದೆ.
ಸಿನಿಮಾ ಪೂರ್ತಿ ವಿಜೃಂಭಿಸಿರುವ ರಿಷಭ್ ಶೆಟ್ಟಿ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಗರುಡ ಗಮನ ವೃಷಭ ವಾಹನದಲ್ಲೂ ರಿಷಭ್ ಅದ್ಭುತವಾಗಿ ನಟಿಸಿದ್ದರು. ಆದ್ರೆ ಕಾಂತಾರ ಸಿನಿಮಾದಲ್ಲಿ ಶಿವ ಪಾತ್ರದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕ್ಲೈಮ್ಯಾಕ್ಸ್’ನಲ್ಲಿ ರಿಷಭ್ ಅಭಿನಯ ನೋಡಿದ ಎಂಥವರೂ ಬೆರಗಾಗುತ್ತಾರೆ. ಇನ್ನು, ಅರಣ್ಯಾಧಿಕಾರಿಯಾಗಿ ಕಾಣಿಸಿಕೊಂಡಿರುವ ಕಿಶೋರ್ ಎಂದಿನಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ನಾಯಕಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಕಾಶ್ ತೂಮಿನಾಡ್, ಮಾನಸಿ ಸುಧೀರ್ ಹೈಲೈಟ್ ಆಗುತ್ತಾರೆ.

ನಿನ್ನೆ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಗೆಳೆಯನ ಪರ್ಫಾಮೆನ್ಸ್ ನೋಡಿದ ನಟ ರಕ್ಷಿತ್ ಶೆಟ್ಟಿ ಥಿಯೇಟರ್’ನಲ್ಲಿ ಓಡಿ ಬಂದು ರಿಷಭ್ ಅನ್ನು ತಬ್ಬಿಕೊಂಡಿದ್ದರು. ಸಿನಿಮಾ ನೋಡಿದ ನಟಿ ರಮ್ಯಾ, ಅಮೂಲ್ಯ, ಅನುಶ್ರಿ, ನಟ ವಿನಯ್ ರಾಜ್ ಕುಮಾರ್, ಶೈನ್ ಶೆಟ್ಟಿ, ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಸೇರಿದಂತೆ ಸ್ಯಾಂಡಲ್‌ವುಡ್ ಮಂದಿ ಹಾಡಿ ಹೊಗಳಿದ್ದಾರೆ. ಸಿನಿಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ಒಟ್ಟಿನಲ್ಲಿ ಕರಾವಳಿ ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ರಿಷಬ್ ಗೆದ್ದಿದ್ದಾರೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಗೆಲುವಿನತ್ತ ದಾಪುಗಾಲಿಟ್ಟಿದೆ.
