ವರಾಹ ರೂಪಂ ಹಾಡಿಗೆ ರೀಲ್ಸ್ ಗೆ ವಿರೋಧ – ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆ ಸಲ್ಲಿಸಿದ ಶ್ವೇತಾ ರೆಡ್ಡಿ

ನ್ಯೂಸ್ ಆ್ಯರೋ : ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಡಿಗೆ ರೀಲ್ಸ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣಳಾಗಿದ್ದ ಶ್ವೇತಾ ರೆಡ್ಡಿಗೆ ಕೊನೆಗೂ ತಪ್ಪಿನ ಅರಿವಾಗಿದೆ. ರೀಲ್ಸ್ ಡಿಲೀಟ್ ಮಾಡಿದ್ದು ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆಯಾಚಿಸಿದ್ದಾಳೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ.

ಸದ್ಯ ದೇಶದಲ್ಲಿ ಕಾಂತಾರ ಸಿನಿಮಾ ಹೊಸ ಹೈಪ್ ಕ್ರಿಯೇಟ್ ಮಾಡಿದೆ. ತುಳುನಾಡಿನ ಸಂಸ್ಕೃತಿ, ದೈವಾರಾಧನೆಯನ್ನು ತೋರಿಸಿದ ಸಿನಿಮಾಗೆ ಜನರು ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿ ಅಭಿನಯಕ್ಕೆ ಮಾರುಹೋಗಿದ್ದಾರೆ. ವರಾಹ ರೂಪಂ, ಸಿಂಗಾರ ಸಿರಿಯೇ ಹಾಡು ಎಲ್ಲರ ಫೇವರೇಟ್ ಆಗಿದೆ. ಸಿಂಗಾರ ಸಿರಿಯೇ ಹಾಡಿಗೆ ರೀಲ್ಸ್, ಶಾರ್ಟ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಆದ್ರೆ ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಮಾತ್ರ ಅದಕ್ಕೂ ಮುಂದೆ ಹೋಗಿ ‘ಪಂಜುರ್ಲಿ’ ದೈವದ ರೀಲ್ಸ್ ಮಾಡಿದ್ದರು. ವರಾಹ ರೂಪಂ ಹಾಡಿನಲ್ಲಿ ರಿಷಬ್ ಕಾಣಿಸಿಕೊಂಡಂತೆ ಶ್ವೇತಾ ರೆಡ್ಡಿ ದೈವದ ವೇಷ ಹಾಕಿ ರೀಲ್ಸ್ ಮಾಡಿದ್ದರು. ಯುವತಿಯ ಈ ಹುಚ್ಚಾಟಕ್ಕೆ ಭಾರಿ ಆಕ್ರೋಶ ಕೇಳಿ ಬಂದಿತ್ತು. ಶ್ವೇತಾ ರೆಡ್ಡಿ ತನ್ನ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಕಿಡಿ ಕಾರಿದ್ದರು. ಹಲವರು ಶ್ವೇತಾ ರೆಡ್ಡಿಯನ್ನು ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ ಅಂತ ಹೇಳಿದ್ದರು. ಅಲ್ಲದೇ ದೈವಗಳು ನೋಡಿಕೊಳ್ಳಲಿ ಅಂತ ಹರಕೆ ಮಾದರಿ ಎಚ್ಚರಿಕೆ ಸಂದೇಶ ಹಾಕಿದ್ದರು.

ಕೊನೆಗೂ ಶ್ವೇತಾ ರೆಡ್ಡಿಗೆ ತನ್ನ ತಪ್ಪಿನ ಅರಿವಾಗಿದೆ. ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದ ಶ್ವೇತಾ ರೆಡ್ಡಿ, ದಯವಿಟ್ಟು ಹರಕೆ ಇಡಬೇಡಿ, ಕ್ಷಮೆ ಕೋರುತ್ತೇನೆ ಎಂದಿದ್ದರು. ಯಾರಿಗೂ ನೋಯಿಸುವ ಉದ್ದೇಶ ನನ್ನದಲ್ಲ. ದೈವಕ್ಕೆ ಮತ್ತು ಸಂಸ್ಕೃತಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಸಂಸ್ಕೃತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತೇನೆ ಅಂತ ಪೋಸ್ಟ್ ಮಾಡಿದ್ದರು. ಇದೀಗ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿದ್ದಾರೆ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆಯಾಚಿಸಿದ್ದಾರೆ.
ತುಳುನಾಡಿನಲ್ಲಿ ದೈವಾರಾಧನೆಗೆ ಮೊದಲ ಪ್ರಾಧಾನ್ಯತೆ. ನಂಬಿದ ದೈವ ಕೈಬಿಡಲ್ಲ ಎನ್ನುವುದು ಎಷ್ಟು ಸತ್ಯವೋ ದೈವಕ್ಕೆ ಅಪಚಾರವಾದರೆ ದೈವಗಳು ಸುಮ್ಮನೆ ಬಿಡಲ್ಲ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ದೈವಗಳು ಹಾಗೂ ಅದನ್ನು ನಂಬುವ ಜನರಿಗೆ ಸ್ವಲ್ಪವೂ ನೋವಾಗದಂತೆ, ಚ್ಯುತಿ ಬರದಂತೆ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ದೈವಾರಾಧನೆಯ ಕುರಿತಾದ ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ. ಅಲ್ಲದೆ, ಸಿನಿಮಾ ಬಿಡುಗಡೆ ಬಳಿಕ ಪ್ರೇಕ್ಷಕರಲ್ಲಿ ದೈವದ ಕೂಗು ಅನುಕರಿಸದಂತೆ, ಅವಮಾನಿದಂತೆ ವಿನಂತಿ ಮಾಡಿದ್ದರು.