ಬಿಗ್ ಬಜೆಟ್ ಚಿತ್ರ ಅವತಾರ್ 2 ಭಾರತದಲ್ಲಿ ರಿಲೀಸ್ – ಎಲ್ಲಾ ಥಿಯೇಟರ್ ಗಳೂ ಹೌಸ್ ಫುಲ್ ಆದ್ರೂ ಚಿತ್ರತಂಡ, ವಿತರಕರು ಬೆಚ್ಚಿಬಿದ್ದಿದ್ದೇಕೆ?

ನ್ಯೂಸ್ ಆ್ಯರೋ : ವಿಶ್ವದಾದ್ಯಂತ ಸಿನಿಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಅವತಾರ್-2 ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸವಾರಿ ಮಾಡೋಕೆ ಸಜ್ಜಾಗಿದ್ದು, ಇಂದು ವಿಶ್ವದಾದ್ಯಂತ ತೆರೆಗಪ್ಪಳಿಸಿದೆ.
ಬಿಡುಗಡೆಯಾದ ಎಲ್ಲಾ ಕಡೆ ಬುಕ್ಕಿಂಗ್ ಫುಲ್ ಆಗಿದ್ದು ಬೆಂಗಳೂರಲ್ಲೂ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಮೂರು ಗಂಟೆಗಿಂತಲೂ ಹೆಚ್ಚು ರನ್ ಟೈಂ ಹೊಂದಿರುವ ಚಿತ್ರ ಇದಾಗಿದ್ದು ಮೊದಲ ದಿನ ಭಾರತದಲ್ಲಿ 40 ಕೋಟಿಗೂ ಹೆಚ್ಚು ಗಳಿಕೆ ನಿರೀಕ್ಷೆ ಇದೆ. ಭಾರತದಲ್ಲಿ ಅವೆಂಜರ್ ಎಂಡ್ ಗೇಮ್ ಸಿನಿಮಾ ದಾಖಲೆ ಹೊಂದಿದ್ದು ಮೊದಲ ದಿನ 53 ಕೋಟಿ ಗಳಿಸಿತ್ತು. ಈ ದಾಖಲೆಯನ್ನು ಅವತಾರ್ ಬ್ರೇಕ್ ಮಾಡುವ ನಿರೀಕ್ಷೆ ಹೊಂದಲಾಗಿದೆ.
2009ರಲ್ಲಿ ಬಿಡುಗಡೆಯಾಗಿ ಅವತಾರ್ ವಿಶ್ವಾದ್ಯಂತ ಮೋಡಿ ಮಾಡಿತ್ತು. 3 ಆಸ್ಕರ್ ಅವಾರ್ಡ್ಗಳನ್ನು ಗೆದ್ದು ಜಗತ್ತಿನಲ್ಲಿ ಡಿಜಿಟಲ್ 3D ಯುಗಾರಂಭಕ್ಕೆ ಕಾರಣವಾಗಿತ್ತು. ಸುಮಾರು 13 ವರ್ಷಗಳ ಬಳಿಕ ರಿಲೀಸ್ ಆಗ್ತಿರೋ ಅವತಾರ್-2 ಬಹಳ ನಿರೀಕ್ಷೆ ಹುಟ್ಟಿಸಿದೆ. ಸುಮಾರು 20ಕ್ಕೂ ಭಾಷೆಗಳಲ್ಲಿ ಫ್ಯಾನ್ ವರ್ಲ್ಡ್ ಸಿನಿಮಾ ರಿಲೀಸ್ ಆಗಿದೆ.
ವರದಿಗಳ ಪ್ರಕಾರ ಅವತಾರ್-2 ಸಿನಿಮಾ ನಿರ್ಮಾಣ ಮಾಡಲು 3351 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮೊದಲು 2555 ಕೋಟಿ ಎಂದು ಹೇಳಲಾಗಿತ್ತು. ಈವರೆಗಿನ ಅತಿಹೆಚ್ಚಿನ ಬಜೆಟ್ ಚಿತ್ರವಾಗಿರುವ ಅವತಾರ್ 2200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
ಬಿಡುಗಡೆ ಬೆನ್ನಲ್ಲೇ ಪೈರಸಿ ಕಾಟ…!!
ಸ್ಯಾಂಡಲ್‌ವುಡ್ ನಿಂದ ಹಾಲಿವುಡ್ ವರೆಗೆ ಪೈರಸಿ ಎನ್ನುವುದು ಸರ್ವೇಸಾಮಾನ್ಯವಾಗಿದ್ದು, ದೊಡ್ಡ ದೊಡ್ಡ ಸಿನಿಮಾಗಳಿಗೆ ಇದರಿಂದ ಭಾರೀ ಪೆಟ್ಟು ಬೀಳುತ್ತಿದೆ. ಈಗಾಗಲೇ ‘ಅವತಾರ್- 2’ ಸಿನಿಮಾ ಕಾಪಿಗಳನ್ನು ಟೆಲಿಗ್ರಾಂ ಹಾಗೂ ಟೊರೆಂಟ್ ವೆಬ್‌ಸೈಟ್‌ಗಳಲ್ಲಿ ಕಿಡಿಗೇಡಿಗಳು ಅಪ್‌ಲೋಡ್ ಮಾಡಿದ್ದಾರೆ. ಸಿನಿಮಾ ಲೀಕ್ ಮಾಡಿ ಲಿಂಕ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಲಂಡನ್‌ನಲ್ಲಿ ಡಿಸೆಂಬರ್ 6ರಂದೇ ‘ಅವತಾರ್- 2’ ಸಿನಿಮಾ ರಿಲೀಸ್ ಆಗಿತ್ತು. ಕಳೆದೊಂದು ವಾರದಿಂದ ಭಾರತ ಸೇರಿದಂತೆ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ನಡೀತಿದೆ. ಹಾಗಾಗಿ ಕಿಡಿಗೇಡಿಗಳು ಸಿನಿಮಾ ಶೂಟ್ ಮಾಡಿ ಲೀಕ್ ಮಾಡಿದ್ದಾರೆ. ಸಿನಿಮಾ ರಿಲೀಸ್‌ಗೂ ಒಂದು ದಿನ ಮೊದಲೇ ಹೀಗೆ ಪೈರಸಿ ಆಗಿರುವುದು ಸಹಜವಾಗಿಯೇ ಚಿತ್ರತಂಡ ಹಾಗೂ ವಿತರಕರಿಗೆ ಆತಂಕ ತಂದಿದೆ.