ಪುನೀತ್ ರಾಜ್‍ಕುಮಾರ್ ಪ್ರಥಮ ವರ್ಷದ ಪುಣ್ಯಸ್ಮರಣೆ – ಅಂಗಾಂಗ ದಾನದ ನೋಂದಣಿಯಲ್ಲಿ ಭಾರೀ ಏರಿಕೆ

ನ್ಯೂಸ್ ಆ್ಯರೋ : ಇಂದು ನಟ ಪುನೀತ್ ರಾಜ್‌ಕುಮಾರ್ ಅವರು ಪ್ರಥಮ ವರ್ಷದ ಸ್ಮರಣೆ ನಡೆಯುತ್ತಿದ್ದು, ಅಪ್ಪು ಅಭಿಮಾನಿಗಳಿಂದ ಪುನೀತ್ ಅಜರಾಮರ ಎಂಬ ಕೂಗು ಕೇಳಿ ಬರುತ್ತಿದೆ.
2021 ಅ. 29ರಂದು ಪುನೀತ್ ಅವರ ಅಕಾಲಿಕ ನಿಧನ ಇಡೀ ಚಿತ್ರರಂಗಕ್ಕೆ ಬರ ಸಿಡಿಲು ಬಡಿದಂತೆ ಆಗಿತ್ತು. ಇನ್ನೂ ಈ ಆಘಾತದಿಂದ ಹೊರಕ್ಕೆ ಬರಲು ಅಭಿಮಾನಿಗಳಿಗೆ ತಿಂಗಳುಗಳೇ ಬೇಕಾದವು. ಸಾವಿನಲ್ಲೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಕಂಡಿದ್ದರು. ಪುನೀತ್ ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬರುವಂತೆ ಆಗಿದೆ. ಇವರ ಈ ಪ್ರೇರಣೆಯ ದಾರಿಯಿಂದ ಈ ವರ್ಷ ಗರಿಷ್ಠ ಸಂಖ್ಯೆಯಲ್ಲಿ ಅಂಗಾಂಗಗಳ ದಾನವಾಗಿದೆ ಎಂದು ರಾಜ್ಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆ ತಿಳಿಸಿದೆ.
ರಾಜ್ಯದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿದ್ದು, ಈ ವರ್ಷ ಈಗಾಗಲೇ 122 ಮಂದಿ ಅಂಗಾಂಗಗಳನ್ನು ದಾನ ಮಾಡಿದ್ದಾರೆ. 2019ರಲ್ಲಿ 105 ಮಂದಿಯಿಂದ ಅಂಗಾಂಗಗಳನ್ನು ಸಂಗ್ರಹಿಸಲಾಗಿದ್ದು, ಇದುವರೆಗೆ ಈ ವರ್ಷದ ಗರಿಷ್ಠ ಸಂಖ್ಯೆಯಾಗಿದೆ. 2020ರಲ್ಲಿ 35 ಹಾಗೂ 2021ರಲ್ಲಿ 70 ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದರು.
ಪುನೀತ್ ಅವರು ಕಣ್ಣುಗಳನ್ನು ದಾನ ಮಾಡಿದ್ದರಿಂದ ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ಅಂಗಾಂಗ ದಾನಕ್ಕೆ ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಇದೀಗ ಜನತೆ ಜಾಗೃತಗೊಂಡಿದ್ದಾರೆ. ಇದರಿಂದ ಅದೆಷ್ಟೋ ಜೀವಗಳಿಗೆ ಹೊಸ ಜೀವನ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಂಗಾಂಗ ದಾನದ ಬಗ್ಗೆ ಜನ ಜಾಗೃತರಾಗುತ್ತಾರೆ ಎನ್ನುತ್ತಾರೆ ಸೊಟ್ಟೊ ಸಂಸ್ಥೆಯ ಅಧಿಕಾರಿ.
ಇನ್ನೂ ಪುನೀತ್ ಅವರು ನಿಧನರಾದ ತಿಂಗಳಿನಲ್ಲಿ 20 ಸಾವಿರ ಜನ ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿದ್ದರು. ಅದೇ ವರ್ಷದಲ್ಲಿ 85 ಸಾವಿರ ಮಂದಿ ಕಣ್ಣುಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿ ಮಾದರಿಯಾಗಿದ್ದಾರೆ.