ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಿಂದ ಹಠಾತ್ತನೆ ಹೊರನಡೆದ ರಿಷಬ್ ಶೆಟ್ಟಿ – ಬ್ಯಾಚುಲರ್ ಪಾರ್ಟಿ ಸಿನಿಮಾಕ್ಕೆ ರಿಷಬ್ ಬದಲು ಲೂಸ್ ಮಾದ ಯೋಗಿ…!!

ನ್ಯೂಸ್ ಆ್ಯರೋ : ರಕ್ಷಿತ್ ಶೆಟ್ಟಿ ನಿರ್ಮಾಣದ, ಅಭಿಜಿತ್ ಮಹೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬ್ಯಾಚುಲರ್ ಪಾರ್ಟಿ’ ಚಿತ್ರದಿಂದ ನಟ ರಿಷಬ್ ಶೆಟ್ಟಿ ಹೊರನಡೆದಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ. ಇದೀಗ ರಿಷಬ್ ಮಾಡಬೇಕಿದ್ದ ಪಾತ್ರವನ್ನು ಲೂಸ್ ಮಾದ ಯೋಗಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಕೆಲವರು ಉತ್ತಮ ಆಯ್ಕೆ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ರಿಷಬ್ ಶೆಟ್ಟಿ ಹೊರ ನಡೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಲೂಸ್ ಮಾದ ಯೋಗಿ ಇದೇ ವರ್ಷ ತೆರೆಕಂಡಿದ್ದ ‘ಹೆಡ್ ಬುಷ್’ ಚಿತ್ರದಲ್ಲಿ ಗಂಗಾ ಎಂಬ ಪಾತ್ರವನ್ನು ಮಾಡಿ ಜನರ ಮನ ಗೆದ್ದು ಮತ್ತಷ್ಟು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ರಂಜಿಸಲು ಇಚ್ಛಿಸುತ್ತೇನೆ ಎಂದಿದ್ದರು.
ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರದ ಕತೆ ಬರೆಯುವಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರದಿಂದ ಹೊರನಡೆದಿರುವ ವಿಷಯವನ್ನು ಬ್ಯಾಚುಲರ್ ಪಾರ್ಟಿ ಚಿತ್ರದ ಮತ್ತೋರ್ವ ನಟ ದಿಗಂತ್ ಅವರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಚಿತ್ರದಿಂದ ರಿಷಬ್ ಶೆಟ್ಟಿ ಹೊರನಡೆದಿರುವುದನ್ನು ಖಚಿತಪಡಿಸಿದ್ದರು.
ಕಾಮಿಡಿ ಎಂಟರ್‌ಟೈನರ್ ಚಿತ್ರಗಳಲ್ಲಿ ತಾನು ನಿಸ್ಸೀಮ ಎಂಬುದನ್ನು ಈ ಹಿಂದೆಯೇ ನಿರೂಪಿಸಿಕೊಂಡಿರುವ ಲೂಸ್ ಮಾದ ಯೋಗಿ ಇದೀಗ ಬ್ಯಾಚುಲರ್ ಪಾರ್ಟಿಯಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಿದೆ. ಸದ್ಯ ಯೋಗೇಶ್ ಅಭಿನಯದ ‘ನಾನು ಅದು ಮತ್ತು ಸರೋಜ’ ಬಿಡುಗಡೆಗೆ ಸಿದ್ಧವಿದ್ದು, ‘ಪರಿಮಳ ಲಾಡ್ಜ್’ ಸಹ ತೆರೆ ಕಾಣಬೇಕಿದೆ. ಇನ್ನುಳಿದಂತೆ ಕಿರಿಕ್ ಶಂಕರ್, ಲಂಕಾಸುರ ಹಾಗೂ ಆಡಿದ್ದೇ ಆಟ ಚಿತ್ರಗಳಲ್ಲಿ ಲೂಸ್ ಮಾದ ಯೋಗಿ ನಟಿಸಿದ್ದಾರೆ.
ಇನ್ನೂ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಹಾಗೂ ದಿಗಂತ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ.