ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ – ಐನೂರಕ್ಕೂ ಅಧಿಕ ಚಿತ್ರಗಳಲ್ಲಿ ಪಾತ್ರಕ್ಕೆ ಜೀವ ತುಂಬಿದ ನಟ ಅನಾರೋಗ್ಯಕ್ಕೆ ಬಲಿ

ನ್ಯೂಸ್ ಆ್ಯರೋ : ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಖ್ಯಾತ ಹಿರಿಯ ಕಲಾವಿದ ಲೋಹಿತಾಶ್ವ (80) ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕುಮಾರಸ್ವಾಮಿ ಲೇಜೌಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ 2.45ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಲೋಹಿತಾಶ್ವ ಅವರು ಆಗಸ್ಟ್ 5, 1942ರಂದು ತುಮಕೂರಿನ, ತೊಂಡಗೆರೆಯಲ್ಲಿ ಜನಿಸಿದರು. ರಂಗಭೂಮಿ ಕಲಾವಿದರಾಗಿ, ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಧ್ವನಿಯ ಮೂಲಕ ಎಲ್ಲರಿಗೂ ಪರಿಚರಾಗಿದ್ದಾರೆ. ಇವರ ಸಾಧನೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ(1997), ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2006) ಲಭಿಸಿತ್ತು. ಇವರಿಗೆ ಮೂವರು ಮಕ್ಕಳಿದ್ದು, ಖ್ಯಾತ ಖಳ ನಟ ಶರತ್ ಲೋಹಿತಾಶ್ವ ಒಬ್ಬರು.
ಅಭಿಮನ್ಯು, AK 47, ಅವತಾರ ಪುರುಷ, ಚಿನ್ನ, ಹೊಸ ನೀರು, ಗಜೇಂದ್ರ, ವಿಶ್ವ, ಪ್ರತಾಪ್, ಪೊಲೀಸ್ ಲಾಕಪ್, ರೆಡಿಮೇಡ್ ಗಂಡ, ಸ್ನೇಹಲೋಕ, ಸುಂದರಕಾಂಡ, ಸಿಂಹದ ಮರಿ, ಮೂರು ಜನ್ಮ, ಸಾಂಗ್ಲಿಯಾನ, ಟೈಮ್ ಬಾಂಬ್, ಲಾಕಪ್ ಡೆತ್, ಸಂಭವಾಮಿ ಯುಗೇ ಯುಗೇ, ರಣಚಂಡಿ, ಸಮಯದ ಗೊಂಬೆ, ಸಂಗ್ರಾಮ, ನ್ಯೂ ಡೆಲ್ಲಿ, ಸಾರಥಿ ಸೇರಿದಂತೆ ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ಅವರ ಅಭಿನಯ ಅತ್ಯಧ್ಬುತ.
ಸುಮಾರು 500ಕ್ಕೂ ಅಧಿಕ ಚಿತ್ರಗಳಿಗೆ ಜೀವ ತುಂಬಿದ ಲೋಹಿತಾಶ್ವ ಅವರ ನೈಜ ಹಾಗೂ ವಿಭಿನ್ನ ಅಭಿನಯಕ್ಕೆ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಅಲ್ಲದೇ ನಾಟಕಗಳು, ದೂರದರ್ಶನ, ಧಾರವಾಹಿಗಳಲ್ಲೂ ನಟಿಸಿದ್ದಾರೆ.