1. Home
  2. Entertainment
  3. ಬಿಸ್ಲೆರಿ ಮಾರುತ್ತಿದ್ದ ಹುಡುಗ ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ರಿಷಬ್ ಶೆಟ್ಟಿ ಸಕ್ಸಸ್’ಫುಲ್ ಜರ್ನಿಯ ಹಿಂದಿದೆ ದಂತಕಥೆ : ನಿಮಗೆ ಗೊತ್ತಿಲ್ಲದ ಕೆಲಸಂಗತಿಗಳು ಇಲ್ಲಿವೆ ನೋಡಿ..

ಬಿಸ್ಲೆರಿ ಮಾರುತ್ತಿದ್ದ ಹುಡುಗ ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ರಿಷಬ್ ಶೆಟ್ಟಿ ಸಕ್ಸಸ್’ಫುಲ್ ಜರ್ನಿಯ ಹಿಂದಿದೆ ದಂತಕಥೆ : ನಿಮಗೆ ಗೊತ್ತಿಲ್ಲದ ಕೆಲಸಂಗತಿಗಳು ಇಲ್ಲಿವೆ ನೋಡಿ..

ಬಿಸ್ಲೆರಿ ಮಾರುತ್ತಿದ್ದ ಹುಡುಗ ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ರಿಷಬ್ ಶೆಟ್ಟಿ ಸಕ್ಸಸ್’ಫುಲ್ ಜರ್ನಿಯ ಹಿಂದಿದೆ ದಂತಕಥೆ : ನಿಮಗೆ ಗೊತ್ತಿಲ್ಲದ ಕೆಲಸಂಗತಿಗಳು ಇಲ್ಲಿವೆ ನೋಡಿ..
0

ನ್ಯೂಸ್ ಆ್ಯರೋ‌ : ಭಾರತದಲ್ಲಿ ಕಾಂತಾರ ಹವಾ ಜೋರಾಗಿದೆ. ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಕರಾವಳಿಯ ಮಣ್ಣಿನ ಕಥೆಯನ್ನು ತೆರೆಮೇಲೆ ತಂದ ರಿಷಬ್ ನಿರ್ದೇಶನ, ನಟನೆಗೆ ಜನರು ಫಿದಾ ಆಗಿದ್ದಾರೆ. ಸಿನಿರಂಗದ ದಿಗ್ಗಜರು ಕಾಂತಾರವನ್ನು ಹಾಡಿ ಹೊಗಳಿದ್ದಾರೆ. ಇವತ್ತು ದೇಶದಲ್ಲಿ ಮಿಂಚುತ್ತಿರುವ ರಿಷಬ್ ಶೆಟ್ಟಿ ಆರಂಭದ ದಿನಗಳು ಹೀಗಿರಲಿಲ್ಲ. ಕನ್ನಡ ಸಿನಿರಂಗದಲ್ಲಿ ಹೆಸರು ಮಾಡೋದು, ನೆಲೆಯೂರೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಅದರ ಹಿಂದೆ ಅಷ್ಟೇ ಪರಿಶ್ರಮ, ಛಲ, ಸಾಹಸಗಾಥೆ ಇರುತ್ತೆ. ಬಿಸ್ಲೆರಿ ಮಾರುತ್ತಿದ್ದ ಯುವಕ ಇವತ್ತು ಡಿವೈನ್ ಸ್ಟಾರ್ ಆಗಿ ಮಿಂಚುತ್ತಿರುವ ಹಿಂದಿದೆ ರೋಚಕ ಕಥೆ.


ರಿಷಬ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯವರು. ಉಡುಪಿಯ ಕೆರಾಡಿಯಲ್ಲಿ 1983 ಜುಲೈ 7ರಂದು ಜನಿಸಿದರು. ಭಾಸ್ಕರ ಶೆಟ್ಟಿ ಹಾಗೂ ರತ್ನಾವತಿ ಶೆಟ್ಟಿ ದಂಪತಿಗಳ ಮಗ. ಹುಟ್ಟೂರಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಪೂರೈಸಿ ಕಾಲೇಜು ಸೇರೋದಕ್ಕೆ ಅಕ್ಕನ ಜೊತೆಗೆ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಕಾಲೇಜು ಶಿಕ್ಷಣದ ಜೊತೆಗೆ ಹೆಸರುಘಟ್ಟದಲ್ಲಿರುವ ಸಿನಿಮಾ ಇನ್ಸ್ಟಿಟ್ಯೂಟ್’ನಲ್ಲಿಯೂ ತರಬೇತಿ ಪಡೆಯುತ್ತಿದ್ದರಂತೆ.

ಇವತ್ತು ರಿಷಬ್ ಶೆಟ್ಟಿಯಾಗಿ ಮಿಂಚುತ್ತಿರುವ ಈ ನಟನ ನಿಜವಾದ ಹೆಸರು ಪ್ರಶಾಂತ್ ಶೆಟ್ಟಿ. ಆರಂಭದಲ್ಲಿ ರಿಷಬ್ ಶೆಟ್ಟಿ ಅವರಿಗೆ ಕೆಲವೊಂದು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತಾದ್ರೂ ಸಿನಿಮಾ ಸೆಟ್ಟೇರುವ ಮೊದಲೇ ಪ್ರಾಜೆಕ್ಟ್ ನಿಂತು ಹೋಗುತ್ತಿತ್ತು. ತಮ್ಮ ಕಷ್ಟದ ಸಮಯದಲ್ಲಿ ತಂದೆ ಭಾಸ್ಕರ ಶೆಟ್ಟಿ ಮಗನಿಗೆ ಧೈರ್ಯ ಹೇಳಿದ್ರು. ಸ್ವತಃ ಜ್ಯೋತಿಷಿಯಾಗಿದ್ದ ಭಾಸ್ಕರ ಶೆಟ್ಟಿ ಮಗನ ಹೆಸರನ್ನು ರಿಷಬ್ ಅಂತ ಬದಲಿಸಿದ್ರು. ಅಲ್ಲಿಂದ ರಿಷಬ್ ಜೀವನವೂ ಬದಲಾಯಿತು.

ರಿಷಬ್’ಗೆ ಸಿನಿಮಾ ಕ್ಷೇತ್ರದಲ್ಲಿ ಸಾಧಿಸಬೇಕೆನ್ನುವ ಛಲವಿತ್ತು. ಆದ್ರೆ ಆ ಹಾದಿ ಅಷ್ಟು ಸುಲಭವಾಗಿರಲಿಲ್ಲ. ನಾಟಕಗಳಲ್ಲಿ ಅಭಿನಯಿಸಿದ್ದರು, ಕ್ಲ್ಯಾಪ್‌ ಬಾಯ್‌, ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದರು. ಆದ್ರೆ ಜೀವನ ಸಾಗಿಸಲು ಆ ಸಂಪಾದನೆ ಸಾಲುತ್ತಿರಲಿಲ್ಲ. ಜೊತೆಜೊತೆಗೆ ಸಿನಿಮಾ ಅವಕಾಶಗಳಿಗಾಗಿ ಅಲೆದಾಡುತ್ತಿದ್ದರು. ದುಡಿಮೆಯಲ್ಲಿ ಉಳಿಸಿದ ಹಣ, ಮನೆಯವರ ಸಹಕಾರದಿಂದ ಹೋಟೆಲ್‌ ವ್ಯವಹಾರವನ್ನು ಆರಂಭಿಸಿದ್ರು. ಆದ್ರೆ ಅದು ಕೈಕೊಟ್ಟಿತ್ತು. ಹೀಗಾಗಿ ಬಿಸ್ಲೆರಿ ಮಾರಾಟ ಮಾಡುವ ಕಾಯಕವನ್ನು ಆರಂಭಿಸಿದ್ರು. ಮುಂದೆ ತುಗ್ಲಕ್‌ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಪರಿಚಯವಾಗಿ ಇವರ ಬದುಕಿಗೆ ಹೊಸ ತಿರುವು ಸಿಗುತ್ತದೆ.

ಸಿನಿಮಾ ಕ್ಷೇತ್ರದಲ್ಲಿ ಮಿಂಚುವ ಕನಸು ಕಾಣುತ್ತಿದ್ದ ರಿಷಬ್ 2010ರಲ್ಲಿ ನಮ್ ಏರಿಯಾಲಿ ಒಂದಿನ ಸಿನಿಮಾದ ಮೂಲಕ ಸ್ಯಾಂಡಲ್ವುಡ್’ಗೆ ಎಂಟ್ರಿ ಕೊಟ್ಟರು. 2012ರಲ್ಲಿ ತುಘಲಕ್ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಅಟ್ಟಹಾಸ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದರು. ಲೂಸಿಯಾ, ಉಳಿದವರು ಕಂಡಂತೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಿಷಬ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. 2016ರಲ್ಲಿ ರಿಕ್ಕಿ ಸಿನಿಮಾದ ಮೂಲಕ ರಿಷಬ್ ಪೂರ್ಣ ಪ್ರಮಾಣದ ನಿರ್ದೇಶಕನಾದರು. ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾಗೆ ಕರ್ನಾಟಕ ರಾಜ್ಯ ಸ್ಟೇಟ್ ಫಿಲ್ಮ್ ಅವಾರ್ಡ್, ಸೈಮಾ ಬೆಸ್ಟ್ ನಿರ್ದೇಶಕ ಅವಾರ್ಡ್, ಫಿಲಂಫೇರ್ ಅವಾರ್ಡ್ ಪಡೆದಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನ, ನಿರ್ಮಾಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ರಾಷ್ಟ್ರ ಪ್ರಶಸ್ತಿ, ಸೈಮಾ ಅವಾರ್ಡ್, ಫಿಲಂಫೇರ್ ಅವಾರ್ಡ್ ಅನ್ನು ಬಾಚಿಕೊಂಡಿದೆ. ಅಂಬಿ ನಿನಗೆ ವಯಸ್ಸಾಯ್ತು, ಬೆಲ್ ಬಾಟಂ, ಕಥಾ ಸಂಗಮ, ಅವನೆ ಶ್ರೀಮನ್ನಾರಾಯಣ, ಹೀರೋ, ಹರಿಕಥೆ ಅಲ್ಲಾ ಗಿರಿಕಥೆ, SriKrishna@gmail.com ಸಿನಿಮಾದಲ್ಲಿಯೂ ರಿಷಬ್ ನಟಿಸಿದ್ದಾರೆ.

ರಾಜ್‌ ಬಿ. ಶೆಟ್ಟಿ ಜೊತೆ ನಟಿಸಿದ ಗರುಡ ಗಮನ ವೃಷಭ ವಾಹನ ಸಿನಿಮಾ ರಿಷಬ್’ಗೆ ಹೆಸರು ತಂದುಕೊಟ್ಟಿತ್ತು. ಆದ್ರೆ ಕಾಂತಾರ ಸಿನಿಮಾ ರಿಷಬ್ ಶೆಟ್ಟಿಯನ್ನು ಇಡೀ ದೇಶಕ್ಕೆ ಪರಿಚಯಿಸಿತು. ಇನ್ನು, ಬೆಲ್ ಬಾಟಂ-2, ಮಹನೀಯರೆ ಮಹಿಳೆಯರೇ, ಅಂತಗೋಣಿ ಶೆಟ್ಟಿ, ಬ್ಯಾಚುಲರ್ ಪಾರ್ಟಿ ಸಿನಿಮಾಗಳು ರಿಷಬ್ ಕೈಯಲ್ಲಿದ್ದು, ಇನ್ನಷ್ಟೇ ರಿಲೀಸ್ ಆಗಬೇಕಿದೆ.

ರಿಷಬ್ ಶೆಟ್ಟಿ 2017ರಲ್ಲಿ ಪ್ರಗತಿ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾದರು. ದಂಪತಿಗೆ ರಣ್ವಿತ್ ಶೆಟ್ಟಿ ಎಂಬ 3 ವರ್ಷದ ಮಗನಿದ್ದು, ಕಳೆದ ಮಾರ್ಚ್’ನಲ್ಲಿ ಹೆಣ್ಣು ಮಗು ಜನಿಸಿದೆ. ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದರು. ಕಾಂತಾರ ಸಿನಿಮಾದಲ್ಲೂ ಕೆಲಸ ಮಾಡಿದ್ದು, ರಾಣಿಯ ರೋಲ್’ನಲ್ಲೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ರಿಷಬ್ ಸಾಧನೆಗೆ ಪತ್ನಿ ಪ್ರಗತಿ ಶೆಟ್ಟಿ ಹೆಗಲುಕೊಟ್ಟು ನಿಂತಿದ್ದಾರೆ.

ಅಂದಹಾಗೆ, ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ವೃತ್ತಿ ಬದುಕಿನಲ್ಲೇ ಮೈಲುಗಲ್ಲನ್ನೇ ಸೃಷ್ಟಿಸಿದ ಸಿನಿಮಾ. ಮಾತ್ರವಲ್ಲ, ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಸಿನಿಮಾ. ಕರಾವಳಿಯ ಭೂತರಾಧನೆ, ದೈವಿಕ ಶಕ್ತಿ, ಸಂಸ್ಕೃತಿಯ ಗರಿಮೆಯನ್ನು ವಿಶ್ವಕ್ಕೆ ತಿಳಿಸಿದ ಸಿನಿಮಾ. ಈ ಕಾಂತಾರ ಸಿನಿಮಾ ಬಗ್ಗೆ ರಿಷಬ್ ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ರಿಲೀಸ್ ಆಗಿ ಮೂರು ವಾರವಾದರೂ ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..