ಕಾಂತಾರದ ವರಾಹ ರೂಪಂ ಹಾಡು ಪ್ರಸಾರಕ್ಕೆ ತಡೆ ನೀಡಿದ ನ್ಯಾಯಾಲಯ – ನಿಜಕ್ಕೂ ಅಜನೀಶ್ ಈ ಹಾಡು ಕದ್ದಿದ್ದು ನಿಜವಾ…!?

ನ್ಯೂಸ್ ಆ್ಯರೋ : ಸ್ಯಾಂಡಲ್‌ವುಡ್ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡು ದೇಶಾದ್ಯಂತ ಸುದ್ದಿ ಮಾಡುತ್ತಿರುವ ‘ಕಾಂತಾರ’ ಸಿನಿಮಾದಲ್ಲಿನ ‘ವರಾಹ ರೂಪಂ’ ಹಾಡು ಪ್ರಸಾರ ಮಾಡದಂತೆ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ತಡೆ ನೀಡಿದೆ.
ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ಥೈಕುಡಂ ಬ್ರಿಡ್ಜ್‌ನಿಂದ ಕೃತಿಚೌರ್ಯದ ದೂರನ್ನು ಸ್ವೀಕರಿಸಿದ ಬಳಿಕ ವಿಚಾರಣೆ ನಡೆಸಿದ ಕೋಝಿಕೋಡ್ ಸೆಷನ್ಸ್ ನ್ಯಾಯಾಲಯವು, ‘ಕಾಂತಾರ’ ಚಿತ್ರದಲ್ಲಿರುವ ವರಾಹ ರೂಪಂ ಹಾಡನ್ನು ಚಿತ್ರಮಂದಿರಗಳಲ್ಲಿ ಮತ್ತು ಇತರ ಆನ್‌ಲೈನ್ ಸ್ಟೀಮಿಂಗ್ ಪ್ಲಾಟ್‌ಫಾರಂಗಳಲ್ಲಿ ಪ್ಲೇ ಮಾಡದಂತೆ ತಡೆಯಾಜ್ಞೆ ನೀಡಿದೆ. ಜನಪ್ರಿಯ ಇಂಡೀ ಮ್ಯೂಸಿಕ್ ಬ್ಯಾಂಡ್ 2015ರಲ್ಲಿ ಬಿಡುಗಡೆಯಾದ ತಮ್ಮ”ನವರಸಂ” ಹಾಡನ್ನು ಕಾಂತಾರದಲ್ಲಿ ಅಳವಡಿಸುವ ಮೂಲಕ ಕೃತಿ ಚೌರ್ಯ ಮಾಡಿದ್ದಾರೆ. ಹಾಗಾಗಿ ಕಾಂತಾರ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.
ನ್ಯಾಯಾಲಯದ ತಡೆಯಾಜ್ಞೆಯ ಸುದ್ದಿಯನ್ನು ಥೈಕುಡಮ್ ಬ್ರಿಡ್ಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು,“ಕೋಝಿಕೋಡ್‌ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರು, ಅಮೆಝಾನ್, ಯೂಟ್ಯೂಬ್, ಸ್ಪಾಟಿಫೈ ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತು ಇತರರಿಗೆ ಅನುಮತಿಯಿಲ್ಲದೆ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ನುಡಿಸದಂತೆ ತಡೆಯಾಜ್ಞೆ ನೀಡಿದ್ದಾರೆ” ಎಂದು ತಿಳಿಸಿದೆ.
“ಥೈಕುಡಮ್ ಬ್ರಿಡ್ಜ್ ಯಾವುದೇ ರೀತಿಯಲ್ಲಿ ‘ಕಾಂತಾರ’ದೊಂದಿಗೆ ಸಂಬಂಧ ಹೊಂದಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಆಡಿಯೋ ವಿಷಯದಲ್ಲಿ ನಮ್ಮ ಐಪಿ ‘ನವರಸಂ’ ಮತ್ತು ‘ವರಾಹ ರೂಪಂ’ ನಡುವೆ ಸಮೀಪದ ಹೋಲಿಕೆಗಳಿವೆ. ಆದ್ದರಿಂದ ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಈ ಆರೋಪವು ಚಿತ್ರ ಬಿಡುಗಡೆಯಾದ ಸಂದರ್ಭದಲ್ಲೇ ಬಂದಿತ್ತು. ಆದರೆ ಅದನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅಲ್ಲಗಳೆದಿದ್ದರು.