1. Home
  2. Entertainment
  3. ತೆರೆಗೆ ಬರಲಿದೆ ಸಾಹಸಿ ಉದ್ಯಮಿ ವಿಜಯ ಸಂಕೇಶ್ವರ ಜೀವನ ಚರಿತ್ರೆ – ಪಂಚ ಭಾಷೆಗಳಲ್ಲಿ ಸಿನಿಮಾ ರಿಲೀಸ್

ತೆರೆಗೆ ಬರಲಿದೆ ಸಾಹಸಿ ಉದ್ಯಮಿ ವಿಜಯ ಸಂಕೇಶ್ವರ ಜೀವನ ಚರಿತ್ರೆ – ಪಂಚ ಭಾಷೆಗಳಲ್ಲಿ ಸಿನಿಮಾ ರಿಲೀಸ್

ತೆರೆಗೆ ಬರಲಿದೆ ಸಾಹಸಿ ಉದ್ಯಮಿ ವಿಜಯ ಸಂಕೇಶ್ವರ ಜೀವನ ಚರಿತ್ರೆ – ಪಂಚ ಭಾಷೆಗಳಲ್ಲಿ ಸಿನಿಮಾ ರಿಲೀಸ್
0

ನ್ಯೂಸ್ ಆ್ಯರೋ‌ : ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನ ಕತೆ ‘ವಿಜಯಾನಂದ’ ಹೆಸರಿನಲ್ಲಿ ಸಿನಿಮಾ ಆಗುತ್ತಿದ್ದು, ಒಂದು ಟ್ರಕ್‌ನಿಂದ ಉದ್ದಿಮೆ ಆರಂಭಿಸಿ ಇಂದು ರಾಷ್ಟ್ರಮಟ್ಟದ ಉದ್ಯಮಿಯಾಗಿ ಬೆಳೆದ, ಮಾಧ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡ ಪದ್ಮಶ್ರೀ ಪುರಸ್ಕೃತ ಸಂಕೇಶ್ವರ ಅವರ ಬದುಕು ಹಾಗೂ ಸಾಧನೆಯನ್ನಾಧರಿಸಿ ಈ ಚಿತ್ರ ಮಾಡಲಾಗುತ್ತಿದೆ.

ಮೊದಲಿನಿಂದಲೂ ಸ್ಟಾರ್ ಕಾಸ್ಟ್, ಕಲಾವಿದರ ಲುಕ್, ಮೇಕಿಂಗ್, ಕುತೂಹಲ ಮೂಡಿಸುವ ಟೀಸರ್, ಬಹುಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆ ಯೋಜನೆ ಸೇರಿ ಹಲವು ಕಾರಣಕ್ಕೆ ಸುದ್ದಿ ಮಾಡಿದ್ದ ಈ ಚಿತ್ರ ತಂಡ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ನವೆಂಬರ್ 6ರಂದು ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆದಿದೆ. ‘ಹಾಗೆ ಆದ ಆಲಿಂಗನ’ ಎಂಬ ರೊಮ್ಯಾಂಟಿಕ್ ಸಾಂಗ್ ಅನ್ನು ಬಿಡುಗಡೆ ಮಾಡುವ ಮೂಲಕ ಮತ್ತೇ ಗಾಂಧಿ ನಗರದಲ್ಲಿ ‘ವಿಜಯಾನಂದ’ ಚಿತ್ರತಂಡ ಸದ್ದು ಮಾಡುತ್ತಿದ್ದು, ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಪಿ ಸುಂದರ್ ಹಾಡಿನ ಪ್ರದರ್ಶನ ನೀಡಿದ್ದಾರೆ. ಡಿಸೆಂಬರ್ 9ಕ್ಕೆ ವಿಜಯಾನಂದ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದ್ದು, ನವೆಂಬರ್ 19ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಈ ಶುಭ ಸಮಾರಂಭದಲ್ಲಿ ನಟ ಶರಣ್, ನಟಿ ಹರ್ಷಿಕಾ ಪೂಣಚ್ಚ ಸೇರಿ ಸ್ಯಾಂಡಲ್‌ವುಡ್‌ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಮಾತನಾಡಿ ‘ಕನ್ನಡದಲ್ಲಿ ಕನ್ನಡದವರ ಬಗ್ಗೆ ಇದೇ ಮೊದಲ ಬಯೋಪಿಕ್ ಸಿನಿಮಾ ಆಗಿದೆ. ಹುಬ್ಬಳ್ಳಿ ಸೇರಿ ಹಲವು ರಾಜ್ಯಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಸಿನಿಮಾದಲ್ಲಿ ನನ್ನ ಪಾತ್ರ ನಿಹಾಲ್ ಮಾಡಿದ್ದಾರೆ. ನನ್ನ ಜೀವನದಲ್ಲಿ ನಡೆದ ಘಟನೆ ಸಿನಿಮಾದಲ್ಲಿ ತೋರಿಸಿದ್ದೇವೆ” ಎಂದಿದ್ದಾರೆ.

ಆನಂದ ಸಂಕೇಶ್ವರ ಈ ಚಿತ್ರ ನಿರ್ಮಿಸುತ್ತಿದ್ದು, ಚೌಕ, ಟ್ರಂಕ್‌ ಚಿತ್ರಗಳಲ್ಲಿ ನಟಿಸಿದ್ದ ಉತ್ತರ ಕರ್ನಾಟಕ ಮೂಲದ ನಟ ನಿಹಾಲ್‌, ವಿಜಯ ಸಂಕೇಶ್ವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದರಲ್ಲಿ 1950 ರಿಂದ 2015ರವರೆಗಿನ ವಿಜಯ ಸಂಕೇಶ್ವರ ಅವರ ಲೈಫ್‌ ಜರ್ನಿ ಇದೆ. ಸಾವಿರಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ನಾನಾ ರಂಗಗಳಲ್ಲಿ ಗುರುತಿಸಿಕೊಂಡಿರುವ ಸಂಕೇಶ್ವರ ಅವರ ಸಾಧನೆಯ ಹಾದಿಯನ್ನು ಈ ಚಿತ್ರ ಪ್ರಚುರ ಪಡಿಸಲಿದೆ.

ಜೊತೆಗೆ ವಿಜಯ್‌ ಸಂಕೇಶ್ವರ ಹಾಗೂ ಅವರ ತಂದೆ, ಆನಂದ ಸಂಕೇಶ್ವರ ಹಾಗೂ ವಿಜಯ ಸಂಕೇಶ್ವರ ನಡುವಿನ ಭಾವನಾತ್ಮಕ ಬಂಧವನ್ನು ಸಿನಿಮಾದಲ್ಲಿ ತರಲಾಗುತ್ತಿದ್ದು, ಇದರಲ್ಲಿ ಉದ್ಯಮಿ ಆನಂದ ಸಂಕೇಶ್ವರರ ಪಾತ್ರವೂ ಬರುತ್ತದೆ. ಮಣಿರತ್ನಂ ಅವರ ಗುರು ಸಿನಿಮಾದಂಥಾ ಕಮರ್ಷಿಯಲ್‌ ಬಯೋಪಿಕ್‌ ಇದಾಗಿದ್ದು, ಗೀತ ಗೋವಿಂದಂನಂತಹ ಜನಪ್ರಿಯ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಗೋಪಿ ಸುಂದರ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಮಹಿರಾ ಸಿನಿಮಾದ ಸಿನಿಮಾಟೋಗ್ರಾಫರ್‌ ಕೀರ್ತನ್‌ ಪೂಜಾರಿ ಕ್ಯಾಮೆರಾ ಹಿಡಿದಿದ್ದು, ಶ್ರೀಮತಿ ಲಲಿತಾ ಸಂಕೇಶ್ವರರ ಪಾತ್ರದಲ್ಲಿ ಸಿರಿ ಪ್ರಹ್ಲಾದ್‌, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಡಾ. ಆನಂದ ಸಂಕೇಶ್ವರರ ಪಾತ್ರದಲ್ಲಿ ಭರತ್ ಬೋಪಣ್ಣ ಹಾಗೂ ವಿಜಯ ಸಂಕೇಶ್ವರರ ಗುರುಗಳ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ವಿಜಯಾನಂದ’ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..