ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ – ಅರ್ಹತೆ ಏನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ..

ನ್ಯೂಸ್ ಆ್ಯರೋ : ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಭಾರತ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಪಾತ್ರವಾಗಿದೆ. ದೇಶದ ಎಲ್ಲ ರಾಜ್ಯಗಳ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.
ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಈ ಯೋಜನೆಯನ್ನು 2005ರ ಸೆಪ್ಟೆಂಬರ್ 5ರಂದು ಜಾರಿಗೆ ತರಲಾಯಿತು. ಆರಂಭದಲ್ಲಿ ಈ ಯೋಜನೆಗೆ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (NREGA) ಎಂದು ಹೆಸರಿಸಲಾಗಿತ್ತು. ಆದರೆ 2009ರ ಅಕ್ಟೋಬರ್ 2ರಂದು ಈ ಯೋಜನೆಯ ಹೆಸರನ್ನು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA)’ ಎಂದು ಬದಲಾಯಿಸಲಾಯಿತು. ಇದು ಬೇರೆಲ್ಲ ಯೋಜನೆಗಳಿಗಿಂತ ಭಿನ್ನವಾಗಿದ್ದು, ಉದ್ಯೋಗ ಖಾತರಿ ಒದಗಿಸುವುದರಿಂದ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಉದ್ದೇಶ
ಈ ಯೋಜನೆಯಡಿ ಉದ್ಯೋಗಾವಕಾಶ ಕಲ್ಪಿಸುವುದು. ಇದು ನೈಸರ್ಗಿಕ ಸಂಪನ್ಮೂಲಗಳನ್ನು ಪುನರ್ನಿರ್ಮಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ಮತ್ತು ಆಸ್ತಿಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ 100 ದಿನಗಳ ಉದ್ಯೋಗ ಒದಗಿಸುವುದು.
ಮನರೇಗಾ ಜಾಬ್ ಕಾರ್ಡ್ ಎಂದರೇನು?
ಮನರೇಗಾಅಥವಾ ನರೇಗಾ ಜಾಬ್ ಕಾರ್ಡ್ ಎಲ್ಲಾ ಫಲಾನುಭವಿಗಳಿಗೆ ಒದಗಿಸಲಾದ ದಾಖಲೆಯಾಗಿದ್ದು, ಫಲಾನುಭವಿಯು ಮಾಡಿದ ಕೆಲಸದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಫಲಾನುಭವಿಯ ಕಾರ್ಡ್‌ನಲ್ಲಿ ನೀಡಬೇಕಾದ ಮಾಹಿತಿ- ಹೆಸರು, ವಿಳಾಸ, ಪೋಷಕರ ಹೆಸರು, ಜಾಬ್ ಕಾರ್ಡ್ ಸಂಖ್ಯೆಯನ್ನು ಹೊಂದಿರುತ್ತದೆ. ಈ ಕಾರ್ಡ್ ಮನರೇಗಾ ಯೋಜನೆಯಡಿ ಕೆಲಸ ಮಾಡುವ ವ್ಯಕ್ತಿಗೆ 100 ದಿನಗಳ ಉದ್ಯೋಗ ನೀಡುವ ಹಕ್ಕನ್ನು ಒದಗಿಸುತ್ತದೆ.
ಅರ್ಹತೆಗಳೇನು..?
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕುಟುಂಬದ ಒಬ್ಬ ವ್ಯಕ್ತಿಗೆ 100 ದಿನಗಳ ಉದ್ಯೋಗ ಖಾತ್ರಿ ನೀಡಲಾಗುವುದು. ಆದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಭಾರತದ ಪ್ರಜೆಯಾಗಿರಬೇಕು, ಅದರಲ್ಲೂ ಗ್ರಾಮೀಣ ಪ್ರದೇಶದ ನಿವಾಸಿಯಾಗಿರಬೇಕು
- ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
- ಅರ್ಜಿದಾರರು ಈ ಯೋಜನೆಯಲ್ಲಿ ಸ್ವಯಂಪ್ರೇರಣೆಯಿಂದ ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಕೆ ಹೇಗೆ..?
- ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು, ಫಲಾನುಭವಿಯು ಸ್ವತಃ ನೋಂದಾಯಿಸಿಕೊಳ್ಳಬೇಕು.
- ಮೊದಲಿಗೆ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ (https://nrega.nic.in/) ಭೇಟಿ ನೀಡಿ.
- ನರೇಗಾ ಯೋಜನೆಯ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
- ಡೌನ್‌ಲೋಡ್ ಮಾಡಿದ ನಂತರ, ನೀವು ಅದರ ಪ್ರಿಂಟ್ ಔಟ್ ಪಡೆದು ಅದರಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ನೀವು ಯಾವುದೇ ಸಮಯದಲ್ಲಿ ಅರ್ಜಿ ನಮೂನೆ ಪಡೆಯಬಹುದು.
- ನೀವು ನೀಡಿದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, 15 ದಿನಗಳೊಳಗೆ ನಿಮ್ಮ ಜಾಬ್ ಕಾರ್ಡ್ ನೀಡುವುದು ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದೆ.
- ಮನರೇಗಾ ಜಾಬ್ ಕಾರ್ಡ್‌ಗಾಗಿ ಬ್ಲಾಕ್ ಆಫೀಸ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.