ನ್ಯಾಯಬೆಲೆ ಅಂಗಡಿಗಳಿಗೆ ಹೈ ಟೆಕ್ ಟಚ್ – ಇನ್ಮುಂದೆ ಒಂದೆಡೆಯೇ ಸಿಗಲಿದೆ ಬ್ಯಾಂಕ್, ಇಂಟರ್ ನೆಟ್, ಗ್ಯಾಸ್ ಸೇವೆ

ನ್ಯೂಸ್ ಆ್ಯರೋ : ನ್ಯಾಯಬೆಲೆ ಅಂಗಡಿಗಳಲ್ಲಿ ಆರ್ಥಿಕ ವಾಹಿವಾಟು ಹೆಚ್ಚಿಸುವ ಉದ್ದೇಶದೊಂದಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಆಗುವಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ, ಬ್ಯಾಂಕ್ ಖಾತೆ ತೆರೆಯುವುದು, ಇಂಟರ್ನೆಟ್ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ.
ಆಹಾರ ಇಲಾಖೆಯು ಈ ಯೋಜನೆಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ತೆರೆಯಲು ಚಿಂತಿಸಿದ್ದು, ಗ್ಯಾಸ್ ಸಿಲಿಂಡರ್, ದಿನಬಳಕೆ ವಸ್ತುಗಳು, ಅಂಚೆ ಇಲಾಖೆಯ ಮೂಲಕ ಬ್ಯಾಂಕ್ ಖಾತೆ ಓಪನ್ ಹಾಗೂ ಎರಡು ರೂ.ಗೆ ಇಂಟರ್ನೆಟ್ ಸೌಲಭ್ಯ ಇನ್ನಿತರ ಸೇವೆಗಳ ಬಗ್ಗೆ ಚಿಂತನೆ ನಡೆಸಿದೆ.
ಈ ಸಂಬಂಧ ಪ್ರಕ್ರಿಯೆಗಳನ್ನು ಆರಂಭಿಸಿರುವ ಇಲಾಖೆ, ಕೆಲ ಸಂಸ್ಥೆಗಳ ಜತೆ ಒಡಂಬಡಿಕೆಯನ್ನೂ ಮಾಡಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂಬರುವ 2 ತಿಂಗಳ ಒಳಗೆ ಈ ಯೋಜನೆ ಜಾರಿಯಾಗಲಿದೆ. ಇನ್ನೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮುಂದಿನ ದಿನಗಳಲ್ಲಿ ಪಿಂಚಣಿ ಸೌಲಭ್ಯ ಸೇರಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ನ್ಯಾಯಬೆಲೆ ಅಂಗಡಿಗಳಲ್ಲೇ ದೊರಕಿಸುವ ಚಿಂತನೆ ಇದೆ. ಈ ರೀತಿಯ ಯೋಜನೆ ಈಗಾಗಲೇ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಜಾರಿಗೆ ಇದೆ.
ರಾಜ್ಯದಲ್ಲಿ 20,168 ನ್ಯಾಯಬೆಲೆ ಅಂಗಡಿಗಳಿದ್ದು, 1,15,79,081 ಬಿಪಿಎಲ್, 23,87,956 ಎಪಿಎಲ್ ಹಾಗೂ 10,90,563 ಅಂತ್ಯೋದಯ ಸೇರಿ ಒಟ್ಟು 1,50,57,600 ಕಾರ್ಡ್ಗಳಿಗೆ ಪ್ರತಿ ತಿಂಗಳು ಪಡಿತರ ವಿತರಣೆ ಆಗುತ್ತಿದೆ. ಪಡಿತರ ವಿತರಣೆಗಾಗಿ ಮಾಲೀಕರಿಗೆ ಸರ್ಕಾರ ನೀಡುವ ಕಮಿಷನ್ ಹೊರತುಪಡಿಸಿ ಬೇರೆ ಆದಾಯ ಇಲ್ಲ. ಹಾಗಾಗಿ, ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ನೀಡುವ ಮೂಲಕ ಮಾಲೀಕರಿಗೂ ಆದಾಯ ಸಿಗುವಂತೆ ಮಾಡಲು ಇಲಾಖೆ ಮುಂದಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆಹಾರ ಇಲಾಖೆಯ ಸಕ್ಷಮ ದಳ ಮತ್ತು ಐಟಿ ವಿಭಾಗದ ಅಪರ ನಿರ್ದೇಶಕ, ‘ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಜನಸ್ನೇಹಿ ಸೇವೆ ಒದಗಿಸಲು ತೀರ್ವನಿಸಿದ್ದೇವೆ. ಆದಷ್ಟೋ ಬೇಗ ಯೋಜನೆಯನ್ನು ಜಾರಿಗೆ ತರುತ್ತೇವೆ. ಇದರಿಂದ ಮಾಲೀಕರಿಗೂ ಆದಾಯ ಸಿಗಲಿದೆ’ಎಂದರು.
ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಪ್ರತಿಕ್ರಿಯಿಸಿ, ‘ಪಡಿತರ ವಿತರಣೆಯಿಂದ ಸರ್ಕಾರ ನೀಡುವ ಕಮಿಷನ್ ಹಣದಲ್ಲಿ ಜೀವನ ನಡೆಸಲು ನಮಗೆ ಕಷ್ಟವಾಗುತ್ತಿದೆ. ಆದ್ದರಿಂದ, ದಿನಬಳಕೆ ಸೇರಿ ಇತರ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದರೆ ನಮಗೂ ಇದರಿಂದ ಅನುಕೂಲವಾಗಲಿದೆ. ಸರ್ಕಾರದ ಈ ನಡೆಗೆ ನಮ್ಮ ಒಮ್ಮತವಿದೆ’ಎಂದರು.
ಈ ಯೋಜನೆ ಅನುಷ್ಠಾನವಾದರೆ ಏನೆಲ್ಲ ಪ್ರಯೋಜನಗಳು?
- ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಖರೀದಿಸಲು ದೂರದ ಹೋಬಳಿಗೆ ಹೋಗುವ ಅಗತ್ಯ ಇರಲ್ಲ
- ಜನರಿಗೆ ಸಮಯದ ಉಳಿತಾಯವಾಗಲಿದೆ.
- ಜಿಲ್ಲೆ/ತಾಲೂಕು ಕೇಂದ್ರಗಳಿಗೆ ಅಲೆಯುವ ಕೆಲಸವಿಲ್ಲ
- ಅಂಗಡಿ ಮಾಲೀಕರಿಗೂ ಆದಾಯ
ಬ್ಯಾಂಕಿಂಗ್ ಸೇವೆಯಿಂದ ಏನೆಲ್ಲ ಉಪಯೋಗ?
ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸದಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಅವಕಾಶ ಸಿಗಲಿದೆ. ಉಳಿತಾಯ ಖಾತೆ, ಚಾಲ್ತಿ ಖಾತೆ ಸೇರಿ ಇತರೆ ಖಾತೆಗಳನ್ನು ತೆರೆಯಬಹುದು.
ಸಿಲಿಂಡರ್ ಲಭ್ಯ :
ಈ ಯೋಜನೆಯ ಪ್ರಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರುಕಟ್ಟೆಯ ದರದಲ್ಲಿ 5 ಕೆ.ಜಿ.ತೂಕದ ಎಲ್ಪಿಜಿ ಸಿಲಿಂಡರ್ಗಳನ್ನು ಮಾರಾಟ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.
ದಿನಬಳಕೆ ವಸ್ತು ಮಾರಾಟ:
ಒಂದೇ ಸೂರಿನಡಿಯಲ್ಲಿ ಅಡುಗೆ ಎಣ್ಣೆ, ಸೋಪು, ಉಪ್ಪು ಇತರ ದಿನಬಳಕೆ ವಸ್ತುಗಳನ್ನು ಕಾರ್ಡ್ದಾರರು ರೇಷನ್ ಪಡೆಯುವ ಸಂದರ್ಭದಲ್ಲಿ ಹಣ ಕೊಟ್ಟು ಖರೀದಿಸಬಹುದು. ದಿನಬಳಕೆಯ ವಸ್ತುಗಳ ಮಾರಾಟದಿಂದ ಮಾಲೀಕರಿಗೂ ಆದಾಯ ಸಿಗಲಿದೆ. ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು.
ಅತಿ ಕಡಿಮೆ ದರದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಇಂಟರ್ ನೆಟ್:
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಆಹಾರ ಇಲಾಖೆಯು ಅತೀ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ಒದಗಿಸಲು ಯೋಜನೆಯನ್ನು ಹಾಕಿಕೊಂಡಿದೆ. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಕಾಯಿನ್ ಬೂತ್ ಸ್ಥಾಪಿಸಿ ಅದರಲ್ಲಿ ಸಾರ್ವಜನಿಕರು, 2 ರೂ.ಕಾಯಿನ್ ಹಾಕಿದರೆ 1 ಅಥವಾ 2 ಜಿಬಿವರೆಗೆ ಇಂಟರ್ನೆಟ್ ಬಳಸಬಹುದಾಗಿದ್ದು, ಈಗಾಗಲೇ ಕೆಲ ಕಂಪೆನಿಗಳ ಜತೆ ನಡೆಸಲಾಗಿದೆ. ಅದಲ್ಲದೆ ಈ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.