ನ್ಯೂಸ್ ಆ್ಯರೋ : ಎಸ್ಸಿ ,ಎಸ್ಟಿ ಸಮುದಾಯದವರಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್ ಜಾಗದಲ್ಲಿ ಸ್ವಂತ ವಾಸದ ಮನೆ ನಿರ್ಮಿಸುವ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಈ ಹಿಂದೆ ಸರ್ಕಾರದಿಂದ ಎಸ್ಸಿ , ಎಸ್ಟಿ ಸಮುದಾಯದವರಿಗೆ ಮಂಜೂರಾದ ಜಮೀನಿನಲ್ಲಿ ಸ್ವಂತ ಮನೆ ನಿರ್ಮಿಸುವ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿ ಅಥವಾ ತಹಸಿಲ್ದಾರರಿಗೆ ನೀಡಬೇಕೆಂದು ಕಂದಾಯ ಸಚಿವರಿಗೆ ರಾಜ್ಯ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು ಮನವಿಯನ್ನು ಮಾಡಿದ್ದರು. ಮನವಿಗೆ ಸ್ಪಂದಿಸಿ ಕಂದಾಯ ಇಲಾಖೆ ಇದೀಗ ಸುತ್ತೋಲೆಯನ್ನು ಹೊರಡಿಸಿದೆ.
ವಾಸದ ಮನೆ ನಿರ್ಮಾಣ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದು, ಒಂದು ವೇಳೆ ಜಮೀನು ಮಾರಾಟ ಮಾಡಬೇಕಾದರೆ ಸರ್ಕಾರ ಪೂರ್ವಾನುಮತಿ ಕಡ್ಡಾಯವಾಗಿದೆ. ನಿಯಮ ಪಾಲನೆಯಲ್ಲಿ ಲೋಪ ಕಂಡುಬಂದರೆ ಜಿಲ್ಲಾಧಿಕಾರಿಯೇ ಹೊಣೆಯಾಗಲಿದ್ದಾರೆ.
ಸರ್ಕಾರದಿಂದ ಎಸ್ಸಿ ,ಎಸ್ಟಿ ಸಮುದಾಯದವರಿಗೆ ಮಂಜೂರಾದ ಜಮೀನುಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ, ಪರಭಾರೆ ಮಾಡಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ 1978ರ ಪ್ರಕಾರ ನಿರ್ಬಂಧ ವಿಧಿಸಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದವರು ಜಮೀನು ರಹಿತರಾಗುವುದನ್ನು ತಪ್ಪಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..