ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಸೇವನೆ ಸೂಕ್ತವೇ? – ಗರ್ಭಿಣಿಯರು ಗ್ರೀನ್ ಟೀ ಕುಡಿದರೆ ಏನಾಗುತ್ತದೆ..?

ನ್ಯೂಸ್ ಆ್ಯರೋ : ಪ್ರತೀ ಹೆಣ್ಣಿನ ಜೀವನದ ಪ್ರಮುಖ ಘಟ್ಟ ಗರ್ಭಧಾರಣೆ. ಗರ್ಭಧರಿಸಿದ ಮೇಲೆ ಎಷ್ಟು ಖುಷಿ ಇರಲಿದೆಯೋ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಜೀವನಶೈಲಿ ಹೇಗಿರಬೇಕು ಎನ್ನುವ ಹತ್ತಾರು ಗೊಂದಲಗಳು ಹುಟ್ಟಿಕೊಳ್ಳುತ್ತವೆ.
ಇತ್ತೀಚಿನ ದಿನಗಳಲ್ಲಂತೂ ದೇಹದ ತೂಕ ಇಳಿಕೆ, ಆರೋಗ್ಯ ಎಂದು ವಿವಿಧ ರೀತಿಯ ಆಹಾರಗಳನ್ನು ಸೇವನೆ ಮಾಡುವುದು ಸಹಜವಾಗಿದೆ. ಆ ರೀತಿಯ ಆಹಾರಗಳಲ್ಲಿ ಗ್ರೀನ್ ಟೀ ಕೂಡ ಒಂದು. ಗ್ರೀನ್ ಟೀ ಅನೇಕರ ದೈನಂದಿನ ಪಾನೀಯಗಳಲ್ಲಿ ಒಂದಾಗಿದೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಈ ಗ್ರೀನ್ ಟೀಯನ್ನು ಗರ್ಭಿಣಿಯರು ಸೇವನೆ ಮಾಡಬಹುದಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಗೆಹೆಚ್ಚು ಸೇವನೆ ಬೇಡ..!
ಯಗ್ರೀನ್ ಟೀಯನ್ನು ಕ್ಯಾಮೆಲಿಯಾ ಸೈನೆನ್ಸಿಸ್ ಸಸ್ಯದಿಂದ ಪಡೆಯಲಾಗುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಇದು ಆರೋಗ್ಯ ಪಾನೀಯವಾಗಿದೆ. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ. ಕೆಲವೊಮ್ಮೆ ಹಸಿರು ಚಹಾವು ದೇಹದಲ್ಲಿ ಫೋಲಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮೊದಲ ತ್ರೈಮಾಸಿಕದಲ್ಲಿ ಆದಷ್ಟು ಗ್ರೀನ್ ಟೀಯನ್ನು ಅವೈಡ್ ಮಾಡಿ.
ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಸೇವನೆ ಮಾಡಬಹುದು. ಕಾಫಿಗಿಂತ ಕಡಿಮೆ ಕೆಫಿನ್ ಅಂಶ ಹೊಂದಿರುವ ಕಾರಣ ತೊಂದರೆಯಾಗದು. ಆದರೆ ಹೆಚ್ಚು ಸೇವನೆ ಬೇಡ.
ಸಂಶೋಧನೆ ಏನು ಹೇಳುತ್ತದೆ..?
ಗ್ರೀನ್ ಟೀ ನಲ್ಲಿ ಕೆಫಿನ್ ಅಂಶ ಇದೆ. ಕೆಫಿನ್ ಅಂಶ ಒಂದು ಹಂತದವರೆಗೆ ಮಾತ್ರ ಗರ್ಭಿಣಿ ಮಹಿಳೆಯರಿಗೆ ಸೇವನೆ ಮಾಡಬಹುದು. ಆದರೆ ಸಂಶೋಧನೆ ಹೇಳುವ ಪ್ರಕಾರ ಒಂದು ದಿನಕ್ಕೆ ಒಬ್ಬ ಗರ್ಭಿಣಿ ಮಹಿಳೆ ಸುಮಾರು 200 ಮಿಲಿಗ್ರಾಂ ಕೆಫಿನ್ ಅಂಶ ಸೇವಿಸಬಹುದು.
ಕೆಫಿನ್ ಅಂಶ ಹೊಂದಿದ ಯಾವುದೇ ಆಹಾರ ಪದಾರ್ಥಗಳನ್ನು ಇಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು. ಅಂದರೆ ಸರಿಸುಮಾರು ಒಂದು ದಿನಕ್ಕೆ ಹೆಚ್ಚೆಂದರೆ ಎರಡು ಕಪ್ ಗ್ರೀನ್ ಟೀ ಕುಡಿಯಬಹುದು.
ಮಗುವಿನ ಆರೋಗ್ಯದ ಮೇಲೆ ಪರಿಣಾಮ
ಕೆಫಿನ್ ಅಂಶ ಹೆಚ್ಚಾಗಿ ಗರ್ಭಿಣಿ ಮಹಿಳೆಯರ ದೇಹ ಸೇರುತ್ತಾ ಹೋದರೆ, ಗರ್ಭಿಣಿ ಮಹಿಳೆಯರು ಸೇವಿಸುವ ಆಹಾರದಲ್ಲಿ ಕಂಡುಬರುವ ಫೋಲಿಕ್ ಆಮ್ಲವನ್ನು ಆಕೆಯ ದೇಹ ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದೆ ಹುಟ್ಟುವ ಮಗುವಿನ ನರಮಂಡಲದ ಸಮಸ್ಯೆ ಎದುರಾಗುತ್ತದೆ.
ಇದರ ಪ್ರಭಾವದಿಂದ ಹುಟ್ಟುವ ಮಗುವಿಗೆ ಬೆನ್ನುಹುರಿಯ ಸಮಸ್ಯೆ ಹುಟ್ಟಿನಿಂದಲೇ ಕಾಡುತ್ತದೆ.
ಗರ್ಭಿಣಿ ಮಹಿಳೆ ಗರ್ಭಾವಸ್ಥೆಗೆ ತಲುಪಿದ ಮೊದಲ 12 ವಾರಗಳಲ್ಲಿ ಫೋಲಿಕ್ ಆಮ್ಲದ ಪ್ರಭಾವ ತುಂಬಬೇಕಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಅತಿಯಾಗಿ ಗ್ರೀನ್ ಟೀ ಸೇವನೆ ಮಾಡಲು ಹೋದರೆ ಈ ಒಂದು ಅಗತ್ಯವಾದ ವಿಟಮಿನ್ ಅಂಶ ಕೈ ತಪ್ಪಿಹೋಗುವ ಸಾಧ್ಯತೆ ಇದೆ.
ಆರೋಗ್ಯದ ಸಮಸ್ಯೆಗಳು ತೀವ್ರವಾಗುವ ಸಾಧ್ಯತೆ
ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರಿಗೆ ಮೆಟಬಾಲಿಸಂ ಪ್ರಕ್ರಿಯೆ ಮೊದಲೇ ಚುರುಕಾಗಿರುತ್ತದೆ. ಆದರೆ ಹೆಚ್ಚಾಗಿ ಕೆಫಿನ್ ಅಂಶ ಹೊಂದಿರುವ ಚಹಾ ಸೇವನೆ ಮಾಡುವುದರಿಂದ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ದೇಹದಲ್ಲಿ ಸಾಕಷ್ಟು ಹಾರ್ಮೋನುಗಳ ಬದಲಾವಣೆ ಉಂಟಾಗುವುದು, ಜೊತೆಗೆ ಮಾನಸಿಕವಾಗಿ ಸಾಕಷ್ಟು ಬದಲಾವಣೆ ಕಂಡುಬರುವುದು ಆಗುವುದರಿಂದ ಆರೋಗ್ಯದ ಸಮಸ್ಯೆಗಳು ತೀವ್ರವಾಗಲಿವೆ. ಹಾಗಾಗಿ ಗರ್ಭಿಣಿ ಮಹಿಳೆಯರು ಎಂದಾದರೂ ಗ್ರೀನ್ ಟೀ ಕುಡಿಯುವ ಇಂಗಿತ ವ್ಯಕ್ತಪಡಿಸಿದರೆ ಅದು ಕೇವಲ ಒಂದು ದಿನಕ್ಕೆ ಎರಡು ಕಪ್ ಮಾತ್ರ ಇರಬೇಕು.
ಇನ್ನೂ ಕೇವಲ ಗ್ರೀನ್ ಟೀ ಮಾತ್ರವಲ್ಲದೆ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಯಾವುದೇ ಚಹಾ ಅಥವಾ ಗಿಡಮೂಲಿಕೆ ಚಹಾ ಕೂಡ ಕುಡಿಯಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದರಿಂದ ಜೀವಕೋಶಗಳಲ್ಲಿ ಕಬ್ಬಿಣದ ಅಂಶದ ಹೀರಿಕೊಳ್ಳುವಿಕೆ ಕಷ್ಟವಾಗುತ್ತದೆ. ಇದರಿಂದ ಸಹಜವಾಗಿ ಗರ್ಭಿಣಿ ಮಹಿಳೆಯರಿಗೆ ಅನಿಮಿಯ ಸಮಸ್ಯೆ ಎದುರಾಗುತ್ತದೆ. ಗರ್ಭದಲ್ಲಿ ಬೆಳವಣಿಗೆ ಆಗುತ್ತಿರುವ ಮಗುವಿಗೂ ಸಹ ಆಮ್ಲಜನಕದ ಕೊರತೆ ಉಂಟಾಗುತ್ತದೆ.