ಎದೆಹಾಲು ಕಡಿಮೆ ಇರುವ ತಾಯಂದಿರು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ – ಉಪಯುಕ್ತ ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ : ಎದೆ ಹಾಲು ಮಗುವಿಗೆ ಅಮೃತ. ಎದೆ ಹಾಲು ಇಲ್ಲದೆ ಬೆಳೆಯುವ ಮಗುವು ಸಾಕಷ್ಟು ಆರೋಗ್ಯ ಸಮಸ್ಯೆಗೆ ಒಳಗಾಗುವುದು. ತಾಯಿ ಸೇವಿಸುವ ಆಹಾರಗಳಿಂದಲೇ ತಯಾರಾಗುವ ಹಾಲು ಮಗುವಿಗೆ ಜೀವಾಮೃತವಾಗುತ್ತದೆ. ಮಗುವಿನ ಹಸಿವನ್ನು ತಣಿಸುವಷ್ಟು ಎದೆಹಾಲಿನ ಪೂರೈಕೆ ಇದ್ದರೆ ಮಗುವು ಆರೋಗ್ಯವಾಗಿ ಬೆಳೆಯುವುದರ ಜೊತೆಗೆ ಮೆದುಳು, ಜೀರ್ಣಾಂಗ ವ್ಯವಸ್ಥೆ, ಮೂಳೆಗಳು ಗಟ್ಟಿಯಾಗುತ್ತಾ ಹೋಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ಮಗುವಿಗೆ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು.
ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ಕೆಲ ತಾಯಂದಿರಲ್ಲಿ ಎದೆಹಾಲಿನ ಕೊರತೆ ಉಂಟಾಗುತ್ತಿದೆ. ಇನ್ನೂ ಅನೇಕರಲ್ಲಿ ಈ ಬಗ್ಗೆ ಭೀತಿಯೂ ಹುಟ್ಟುತ್ತಿದೆ. ಬದಲಾದ ಜೀವನಶೈಲಿ, ಆಹಾರ ಪದ್ದತಿ ಸೇರಿದಂತೆ ಅನೇಕ ಕಾರಣಗಳಿಂದ ತಾಯಂದಿರಲ್ಲಿ ಎದೆಹಾಲಿನ ಉತ್ಪತ್ತಿ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಆದರೆ ಈ ಸಮಸ್ಯೆಗೆಲ್ಲಾ ಚಿಂತಿಸುವ ಬದಲು ಕೆಲವೊಂದು ಆಹಾರ ಪದಾರ್ಥಗಳನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇರಿಸುತ್ತಾ ಬಂದರೆ, ಖಂಡಿತವಾಗಿ ಎದೆ ಹಾಲನ್ನು ಹೆಚ್ಚಿಸಿಕೊಳ್ಳಬಹುದು
ಪುರಾತನ ಕಾಲದಿಂದಲೂ ಕೆಲವು ಮನೆ ಮದ್ದು, ಆಯುರ್ವೇದ ಚಿಕಿತ್ಸೆ ಹಾಗೂ ಆಹಾರ ಕ್ರಮಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತಿವೆ. ತಾಯಿ ತನ್ನ ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಸೂಕ್ತ ಆಹಾರ ವಸ್ತುಗಳ ಆಯ್ಕೆಯನ್ನು ಮಾಡಬೇಕು. ಅವು ಹಾರ್ಮೋನಗಳ ಮೇಲೆ ಹಾಗೂ ಹಾಲು ಉತ್ಪಾದನೆಯಲ್ಲಿ ಅತ್ಯುತ್ತಮ ಸಹಕಾರ ನೀಡುತ್ತವೆ. ಅಂತಹ ಆಹಾರ ಪದಾರ್ಥಗಳು ಯಾವುವು? ಅವುಗಳಿಂದ ಹೇಗೆ ಎದೆಹಾಲು ಹೆಚ್ಚುತ್ತದೆ ಎಂಬ ಮಾಹಿತಿ ಇಲ್ಲಿದೆ.
ತುಳಸಿ
ತುಳಸಿ ವೈದ್ಯಕೀಯ ಶಾಸ್ತ್ರ ಹಾಗೂ ಧಾರ್ಮಿಕ ವಿಷಯದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ತುಳಸಿಯ ಪ್ರಯೋಜನಗಳು ಅಪಾರ. ಅದ್ಭುತ ಶಕ್ತಿಯನ್ನು ಹೊಂದಿರುವ ತುಳಸಿಯು ತಾಯಿಯ ಎದೆಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎದೆಹಾಲಿನ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರು ತುಳಸಿ ಎಲೆಯ ಕಷಾಯ ಅಥವಾ ಚಹಾದಲ್ಲಿ ತುಳಸಿ ಎಲೆಯನ್ನು ಸೇರಿಸಿ, ಸವಿಯಬಹುದು. ತುಳಸಿ ಎಲೆಯು ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಸಹ ಉತ್ತೇಜಿಸುತ್ತದೆ.
ಮೆಂತೆ
ಹಾಲು ಹೆಚ್ಚಿಸುವ ಮತ್ತೊಂದು ಸೂಪರ್ ಫುಡ್ ಎಂದರೆ ಮೆಂತ್ಯ ಕಾಳುಗಳು. ಆಯುರ್ವೇದವು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಮೆಂತ್ಯ ಕಾಳಿಗೆ ಒತ್ತು ನೀಡುತ್ತದೆ. ನೀವು ಮೆಂತ್ಯ ಲಡ್ಡು ಅಥವಾ ಮೆಂತ್ಯ ಚೂರ್ಣ ತಯಾರಿಸಿ, ನಿಮ್ಮ ಊಟದ ನಂತರ ಅದನ್ನು ಸೇವಿಸಬಹುದು. ಮೆಂತ್ಯ ಕಾಳುಗಳನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿ, 6-7 ಗಂಟೆಗಳ ನಂತರ ಆ ನೀರನ್ನು ಕುಡಿಯುವುದು ಸುಲಭವಾದ ಮಾರ್ಗವಾಗಿದೆ.
ಮೊಟ್ಟೆ
ಸಂಪೂರ್ಣ ಪ್ರೋಟೀನ್ ಹೊಂದಿರುವ ಕೆಲವೇ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು. ಮೊಟ್ಟೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ 12, ವಿಟಮಿನ್ ಡಿ, ವಿಟಮಿನ್ ಇ ಮತ್ತು ಫೋಲೇಟ್, ಸೆಲೆನಿಯಮ್, ಕೋಲೀನ್ ಮತ್ತು ಇತರ ಅನೇಕ ಖನಿಜಾಂಶಗಳಿವೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ, ಇದು ನವಜಾತ ಶಿಶುಗಳಿಗೆ ಮುಖ್ಯವಾಗಿದೆ.
ಮೀನು
ಮೀನು ಗರ್ಭಿಣಿ ಮಹಿಳೆಗೆ ಮಾತ್ರವಲ್ಲದೆ ಹಾಲುಣಿಸುವ ತಾಯಿಗೆ ಸಹ ಪ್ರಯೋಜನಕಾರಿಯಾಗಿದೆ. ಸಾಲ್ಮನ್ ಮೀನು ಪ್ರೋಟೀನ್ ಮತ್ತು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ನರಮಂಡಲದ ಬೆಳವಣಿಗೆಗೆ ಮುಖ್ಯವಾಗಿದೆ.
ಪಪ್ಪಾಯ
ಎಲ್ಲಾ ಕಾಲ ಮಾನದಲ್ಲೂ ಸಾಮಾನ್ಯವಾಗಿ ದೊರೆಯುವ ಹಣ್ಣು ಪಪ್ಪಾಯ. ಈ ಹಣ್ಣು ಪ್ರಸವದ ನಂತರ ತಾಯಿಗೆ ಅದ್ಭುತ ಪೋಷಣೆ ಹಾಗೂ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ಗ್ಯಾಲಕ್ಟಾಗೋಗ್ ಪ್ರಮಾಣ ಅಧಿಕವಾಗಿದ್ದು, ಎದೆಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತಾಯಂದಿರು ಪ್ರಸವದ ನಂತರ ಪಪ್ಪಾಯ ಹಣ್ಣನ್ನು ಜೂಸ್ ಮೂಲಕ, ಸಲಾಡ್‍ನ ರೀತಿಯಲ್ಲಿ, ಆಹಾರ ಪದಾರ್ಥಗಳನ್ನು ತಯಾರಿಸಿ ಅಥವಾ ಕಚ್ಚಾ ಹಣ್ಣುಗಳನ್ನು ಸಹ ಹಾಗೆಯೇ ತಿನ್ನಬಹುದು. ಮಗುವಿನ ಬೆಳವಣಿಗೆಗೆ, ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.
ಬಾದಾಮಿ
ಬಾದಾಮಿಯು ಕೊಂಚ ದುಬಾರಿಯಾಗಿರಬಹುದು. ಆದರೆ ಅದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿವೆ. ಇದನ್ನು ನಿತ್ಯವೂ ಗಣನೀಯವಾಗಿ ಸೇವಿಸಿದರೆ ತಾಯಿಯ ಎದೆಹಾಲು ಹೆಚ್ಚುವುದು. ಜೊತೆಗೆ ಮಗುವಿನ ಬೆಳವಣಿಗೆಗೆ ಬೇಕಾದ ಪ್ರೋಟೀನ್ ಮತ್ತು ಪೋಷಕಾಂಶವು ದೊರೆಯುವುದು. ಬಾಣಂತಿಯರು ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸವಿಯಬಹುದು. ಇಲ್ಲವೇ ಬಾದಾಮಿ ಪುಡಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಕುಡಿಯಬಹುದು.
ಹಾಲು
ಹಾಲಿನಲ್ಲಿ ಸಮೃದ್ಧವಾದ ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಆರೋಗ್ಯಕರವಾದ ಕೊಬ್ಬುಗಳು ಅಧಿಕವಾಗಿರುತ್ತವೆ. ಅವು ಮಗುವಿನ ಬೆಳವಣಿಗೆ ಹಾಗೂ ತಾಯಿಯ ಎದೆಹಾಲಿನ ಉತ್ಪಾದನೆಗೆ ಸಹಾಯ ಮಾಡುತ್ತದೆ. ತಾಯಿ ಅಧಿಕ ಹಾಲನ್ನು ಕುಡಿಯುವುದರಿಂದ ಮಗುವಿಗೆ ಮಗುವಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಸಮತೋಲನದಲ್ಲಿ ಇಡುವಂತೆ ಮಾಡುತ್ತದೆ. ಹಾಗಾಗಿ ಎದೆಹಾಲನ್ನು ಹೆಚ್ಚಿಸಿಕೊಳ್ಳಲು ತಾಯಂದಿರು ದಿನಕ್ಕೆ ಎರಡು ಗ್ಲಾಸ್ ಹಾಲನ್ನು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.