‘ಉದ್ಯೋಗಿನಿ ಯೋಜನೆ’ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಮೂರು ಲಕ್ಷ ರೂಪಾಯಿ ಸಾಲ ಸೌಲಭ್ಯ – ಈ ಯೋಜನೆ ಸೌಲಭ್ಯ ಪಡೆಯುವುದೇಗೆ..?ಇಲ್ಲಿದೆ ಮಾಹಿತಿ…

ನ್ಯೂಸ್ ಆ್ಯರೋ : ನಿರುದ್ಯೋಗಿ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಹೊಂದಲು ನೆರವಾಗಲು ರಾಜ್ಯ ಸರ್ಕಾರ ‘ಉದ್ಯೋಗಿನಿ ಯೋಜನೆ’ ಜಾರಿ ಮಾಡಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಸಾಲ ಸೌಲಭ್ಯ ಒದಗಿಸುತ್ತಿದೆ.
ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾನ್ಯ ಮಹಿಳೆಯರು ಯಾವುದಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಬ್ಯಾಂಕಿನಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುವುದು. ವಿಧವೆ, ಅಂಗವಿಕಲ ಹಾಗೂ ಸಂಕಷ್ಟದಲ್ಲಿರುವ ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇ.30ರಷ್ಟು ಅಥವಾ ಗರಿಷ್ಠ 90 ಸಾವಿರ ರೂ.ಗಳ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮಹಿಳೆಯರಿಗೆ ಶೇ.50ರಷ್ಟು ಅಥವಾ ಗರಿಷ್ಠ 1,50,000 ರೂ.ಗಳವರೆಗೆ ಸಹಾಯಧನವನ್ನು ನೀಡಲಾಗುವುದು.
ಯಾರೆಲ್ಲ ಅರ್ಜಿ ಸಲ್ಲಿಸ ಬಹುದು?
ಈ ಸೌಲಭ್ಯಕ್ಕೆ 18ರಿಂದ 55 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ/ಪಂಗಡದವರಾಗಿದ್ದಲ್ಲಿ ವಾರ್ಷಿಕ ಆದಾಯ 2 ಲಕ್ಷ ರೂ.ಗಳ ಒಳಗಿರಬೇಕು. ಸಾಮಾನ್ಯ ವರ್ಗದವರಾಗಿದ್ದಲ್ಲಿ ವಾರ್ಷಿಕ ಆದಾಯ 1.5 ಲಕ್ಷ ರೂ.ಗಳ ಒಳಗಿರಬೇಕು.
ಈ ದಾಖಲೆಗಳು ಅಗತ್ಯ
ಆಸಕ್ತರು ಜಾತಿ/ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪತ್ರ, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ, ಯೋಜನಾ ವರದಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ (ಮೊದಲನೇ ಹಾಗೂ ಕೊನೆಯ ಪುಟ) ಅರ್ಜಿ ಸಲ್ಲಿಸಬಹುದಾಗಿದೆ. ವಿಧವೆ, ಅಂಗವಿಕಲರು, ಸಂಕಷ್ಟಗೊಳಗಾದ ಮಹಿಳೆಯರು ತಮ್ಮ ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಅರ್ಹ ಮಹಿಳೆಯರು ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಈ ಉದ್ಯಮಗಳ ಪ್ರಾರಂಭಕ್ಕೆ ಸಿಗಲಿದೆ ಸಾಲ
ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ -ಟೀ ಅಂಗಡಿ, ಟೈಲರಿಂಗ್, ಎಸ್‌ಟಿಡಿ ಬೂತ್, ಬ್ಯೂಟಿ ಪಾರ್ಲರ್, ಅಗರಬತ್ತಿ, ಕ್ಲಿನಿಕ್, ಜಿಮ್, ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ, ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ.
ವಯೋಮಿತಿ
ಈ ಹಿಂದೆ ಯೋಜನಾ ಫಲಾನುಭವಿಗಳ ವಯೋಮಿತಿಯನ್ನು 45ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈಗ 55 ವರ್ಷಗಳಿಗೆ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಜತೆಗೆ ವಾರ್ಷಿಕ ಆದಾಯದ ಮಿತಿಯನ್ನು 40 ಸಾವಿರದಿಂದ ರೂ. 1.5 ಲಕ್ಷಗಳಿಗೆ ಏರಿಸಲಾಗಿದೆ. ಕಳೆದ 40 ವರ್ಷಗಳಿಂದ ಉದ್ಯೋಗಿನಿ ನಿಯಮಗಳು ಬದಲಾಗಿರಲಿಲ್ಲ.
ಸಾಲ ಸೌಲಭ್ಯಕ್ಕಾಗಿ ಈ ಬ್ಯಾಂಕ್ ಗಳನ್ನು ಸಂಪರ್ಕಿಸಿ
ವಾಣಿಜ್ಯ ಬ್ಯಾಂಕುಗಳು, ಜಿಲ್ಲೆಯ ಸಹಕಾರಿ ಬ್ಯಾಂಕುಗಳು ಮತ್ತು ಆರ್ಆರ್ಬಿಗಳಂತಹ ಹಣಕಾಸು ಸಂಸ್ಥೆಗಳ ಮೂಲಕ ಸಾಲಗಳನ್ನು ಹೊಂದಿಸಲಾಗುತ್ತದೆ. ಖಾಸಗಿ ಸಂಸ್ಥೆಗಳಿಂದ ಅತಿಹೆಚ್ಚು ಬಡ್ಡಿದರದಲ್ಲಿ ಸಾಲ ಪಡೆಯುವ ಮಹಿಳಾ ಉದ್ಯಮಿಗಳನ್ನು ಸಹಕರಿಸಲು ಈ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ.
ಅರ್ಜಿ ಎಲ್ಲಿ ಲಭ್ಯ?
ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಅರ್ಜಿಗಳು ಉಚಿತವಾಗಿ ಸಿಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕರ ಕಛೇರಿ ಸಂಪರ್ಕಿಸಬಹುದಾಗಿದೆ.
ಉದ್ಯೋಗಿನಿ ಯೋಜನೆ ಎಂದರೇನು?
ಉದ್ಯೋಗಿನಿ ಎಂದರೆ ಮಹಿಳಾ ಉದ್ಯಮಿ ಮತ್ತು ಸರ್ಕಾರವು ಭಾರತೀಯ ಮಹಿಳಾ ಉದ್ಯಮಿಗಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಭಾರತ ಸರ್ಕಾರದ ಅಡಿಯಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆ ಜಾರಿಗೊಳಿಸಲಾಗಿದೆ.
ಪ್ರಸ್ತುತ ದಿನಗಳಲ್ಲಿ ನಾವು ಮಹಿಳೆಯರನ್ನು ಎಲ್ಲ ವಿಭಾಗಗಳಲ್ಲೂ ನೋಡಬಡುದು, ಸೇನೆ, ವಿಮಾನಯನ, ರಸ್ತೆ ಸಾರಿಗೆ, ನೌಕಾ ಪಡೆ, ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆಯರು ಅತ್ಯುತ್ತಮ ಸಾಧನೆ ಗೈಯುತ್ತಿದ್ದಾರೆ. ಅದೇ ರೀತಿ ಮಹಿಳೆಯರು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶ ಈ ಯೋಜನೆಯಾಗಿದೆ.
ಈ ಯೋಜನೆಯು ಮಹಿಳೆಯರಿಗೆ ವ್ಯಾಪಾರ ಮಾಡಲು ಹಣಕಾಸಿನ ನೆರವು ನೀಡುವ ಮೂಲಕ ಬಡವರಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರೇರೇಪಿಸುತ್ತದೆ. ಹಾಗೇ ಈ ಯೋಜನೆಯಿಂದ ವ್ಯಕ್ತಿಯ ಮತ್ತು ಕುಟುಂಬದ ಆದಾಯವನ್ನು ದುಪ್ಪಟ್ಟಾಗಲಿದ್ದು, ದೇಶದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.