ಸುಬ್ರಹ್ಮಣ್ಯ : ಷಷ್ಠಿಯ ದಿನ ಪೋಲಿಸರಿಂದ ಬಡ ವ್ಯಾಪಾರಿಗಳ ಎರ್ರಾಬಿರ್ರಿ ಸುಲಿಗೆ – ಕೇಳಿದಷ್ಟು ಕೊಡದ್ದಕ್ಕೆ ಹಿಗ್ಗಾಮುಗ್ಗಾ ಬಡಿದ್ರಂತೆ..!! ಏನಿದು ಸುದ್ದಿ?

ನ್ಯೂಸ್ ಆ್ಯರೋ : ಸುಬ್ರಹ್ಮಣ್ಯ ಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೊಬ್ಬನಿಗೆ ಹಣ ನೀಡುವಂತೆ ಒತ್ತಾಯಪಡಿಸಿದ್ದಲ್ಲದೇ ಸಾವಿರ ರೂಪಾಯಿ ವಸೂಲಿ ಮಾಡಿ ಇನ್ನೂ ಹಣ ನೀಡುವಂತೆ ಪೀಡಿಸಿ ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಡಬ ಸಮೀಪದ ಕುಟ್ರುಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕಿರಣ್ ಎಂಬವರು ಪೋಲಿಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಶಶಿಕಿರಣ್ ಅವರು ಚಂಪಾಷಷ್ಠಿಯಂದು ನಾನು ಜ್ಯೂಸ್ ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದು, ಪಂಚಮಿಯ ರಾತ್ರಿ 12 ಗಂಟೆ ಸುಮಾರಿಗೆ ತನ್ನ ಬಳಿ ಬಂದ ಪೊಲೀಸ್ ಕಾನ್ಸ್‌ಟೇಬಲ್ ಭೀಮಣ್ಣ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ನಾನು ಹೆದರಿ 1000 ನೀಡಿದ್ದೇನೆ. ಈ ಹಣ ಸಾಕಾಗುವುದಿಲ್ಲ. 5000 ನೀಡುವಂತೆ ಬೆದರಿಸಿದ್ದು, ಅಷ್ಟು ಹಣ ನೀಡದಿದ್ದಾಗ ನನ್ನನ್ನು ಠಾಣೆಯ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ಹಲ್ಲೆಗೊಳಗಾದ ಯುವಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಾಹಿತಿ ಪಡೆದ ಹಿಂದೂ ಪರ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ಯುವಕನಲ್ಲಿ ಮಾಹಿತಿ ಪಡೆದಿದ್ದು ತಪ್ಪಿತಸ್ಥ ಪೊಲೀಸ್ ಸಿಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.