ಕಡಬ : ನೂಜಿಬಾಳ್ತಿಲ ಗ್ರಾಮದಲ್ಲಿ ಆನೆ ಹಿಂಡು ದಾಳಿ – ಲಕ್ಷಾಂತರ ಮೌಲ್ಯದ ಕೃಷಿ ನಾಶ, ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ

ನ್ಯೂಸ್ ಆ್ಯರೋ : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ಮತ್ತೆ ಕಾಡಾನೆ ಉಪಟಳ ಶುರುವಾಗಿದ್ದು, ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಕಳೆದ ರಾತ್ರಿ ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆಯ ಹಿಂಡು ಹಲವೆಡೆ ಹಾವಳಿ ಇಟ್ಟಿದೆ.


ನೂಜಿಬಾಳ್ತಿಲ ಗ್ರಾಮದ ಸಾಂತ್ಯಡ್ಕ ಎಂಬ ಪ್ರದೇಶಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು ಇಲ್ಲಿನ ನಿವಾಸಿ ಲಕ್ಷಣ ಗೌಡ ಸಾಂತ್ಯಡ್ಕ, ಪ್ರಸಾದ್ ಸಾಂತ್ಯಡ್ಕ, ಸುಧಾಕರ ಸಾಂತ್ಯಡ್ಕ ಎಂಬವರಿಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶ ಮಾಡಿದೆ. ಅಲ್ಲದೆ ಅಪಾರ ಪ್ರಮಾಣದ ಬಾಳೆ ಗಿಡಗಳನ್ನು ಹಾಗೂ ತೆಂಗಿನ ಮರಗಳನ್ನು ಹಾಳುಗೆಡವಿದೆ.
ನಿರಂತರ ಕಾಡಾನೆ ದಾಳಿಯಿಂದ ಈ ಭಾಗದ ಕೃಷಿಕರು ಕಂಗೆಟ್ಟಿದ್ದು ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಘಟನಾ ಸ್ಥಳಕ್ಕೆ ಸುಬ್ರಮಣ್ಯ ಫಾರೆಸ್ಟ್ ರೇಂಜರ್ ರಾಘವೇಂದ್ರ, ಪಂಜ ಫಾರೆಸ್ಟ್ ರೇಂಜರ್ ಮಂಜುನಾಥ ಮತ್ತು ಅಧಿಕಾರಿಗಳಾದ ಅಜಿತ್ ಮತ್ತು ಸುಬ್ರಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಲಕ್ಷಣ ಗೌಡ ಸಾಂತ್ಯಡ್ಕ ಇವರು ಆನೆಗಳು ಕೃಷಿ ಪ್ರದೇಶಕ್ಕೆ ಬಾರದಂತೆ ಕಂದಕ ನಿರ್ಮಿಸಬೇಕೆಂದು ಅರಣ್ಯಾಧಿಕಾರಿಗಳ ಬಳಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು ಶೀಘ್ರವೇ ಕಂದಕ ನಿರ್ಮಾಣ ಕೆಲಸ ಪ್ರಾರಂಭ ಮಾಡಲಾಗುವುದು ಎಂದರು.
ಈ ಸಂದರ್ಭ ನೂಜಿಬಾಳ್ತಿಲ ಗ್ರಾಮ ಪಂಚಾಯತ್’ನ ಪ್ರಭಾರ ಪಿ.ಡಿ.ಯೋ ಗುರುವ ಹಾಗೂ ಪಂಚಾಯತ್ ಸದಸ್ಯ ಚಂದ್ರಶೇಖರ ಗೌಡ ಹಳೇನೂಜಿ ಉಪಸ್ಥಿತರಿದ್ದರು.
ನೂಜಿಬಾಳ್ತಿಲ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ಕಾಡಾನೆ ದಾಳಿಯಿಂದ ಈ ಭಾಗದ ಕೃಷಿಕರು ಹೈರಾಣಾಗಿ ಹೋಗಿದ್ದು, ಇವರ ಕೂಗು ಕೇವಲ ಅರಣ್ಯರೋದನವಾಗಿದೆ. ಗ್ರಾಮಸ್ಥರು ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.