
ನ್ಯೂಸ್ ಆ್ಯರೋ : ಮೊದಮೊದಲು ದೊಡ್ಡ ಸಿಟಿಗಳಲ್ಲಿ ಮಾತ್ರವೇ ಇದ್ದ ಮಾದಕ ವಸ್ತುಗಳ ಮಾಫಿಯಾ ಈಗ ಹಳ್ಳಿಗಳಿಗೂ ವ್ಯಾಪಿಸಿದೆ. ಹಾಗೆಯೇ ತಾಲೂಕು ಕೇಂದ್ರವಾದ ಕಡಬದಲ್ಲಿಯೂ ಅಕ್ರಮ ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲಾಗುತ್ತಿದೆ ಎಂದು ಅಲ್ಲಿ- ಇಲ್ಲಿ ಗುಸು ಗುಸು ಕೇಳಿ ಬರುತ್ತಿದೆ.
ಹಲವಾರು ಬಾರಿ ಈ ಬಗ್ಗೆ ಸಂಬಂಧಪಟ್ಟ ಪೋಲಿಸ್ ಇಲಾಖೆ ಹಾಗೂ ಸ್ಥಳಿಯಾಡಳಿತಕ್ಕೆ ಸಾರ್ವಜನಿಕರು ಲಿಖಿತವಾಗಿ ಅಲ್ಲದಿದ್ದರೂ ಮೌಖಿಕವಾಗಿ ಈ ಗುಮಾನಿ ಬಗ್ಗೆ ಪ್ರಸ್ತಾಪಿಸಿದ್ದರು.
ಕಾಲೇಜು ಹುಡುಗರು ಹಾಗೂ ಯುವಕರೇ ಇವರ ಟಾರ್ಗೆಟ್..!!
ಹೌದು.. ಈ ಗಾಂಜಾ ಮಾಫಿಯಾವು ಯುವಜನತೆಯನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಕಬಂಧ ಬಾಹುಗಳನ್ನು ಹರಡಿದೆ. ಇದರಿಂದ ಹಲವಾರು ಕಾಲೇಜು ಹುಡುಗರು ಕಾಲೇಜಿಗೂ ಹೋಗದೆ, ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದಾರೆ.
ಆಪ್ತ ಮೂಲಗಳ ಪ್ರಕಾರ ಒಂದು ತಿಂಗಳಿಗೆ 5 ಲಕ್ಷ ರೂಪಾಯಿಗಳ ಗಾಂಜಾ ವಹಿವಾಟು ಕಡಬ ತಾಲೂಕಿನಲ್ಲಿಯೇ ನಡೆಯುತ್ತಿದೆಯಂತೆ. ಇದೀಗ ಇದನ್ನು ಕಂಟ್ರೋಲ್ ಮಾಡಲಾಗದ ಸ್ಥಿತಿಗೆ ಬಂದು ತಲುಪಿದೆ.
ಇದಕ್ಕೆ ಪುಷ್ಟಿ ನೀಡಲು ಪೂರಕವೆಂಬಂತೆ ನಿನ್ನೆ ಕಡಬ ಪೊಲೀಸರಿಗೆ ಕಳಾರದ ಅಂಗಡಿಯೊಂದರ ಬಳಿ ಗಾಂಜಾ ಸೇವನೆ ಮಾಡಿ ಓರ್ವ ವ್ಯಕ್ತಿ ತೂರಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಕಡಬದ ಪೊಲೀಸ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ತಂಡ ಘಟನಾ ಸ್ಥಳಕ್ಕೆ ತೆರಳಿದಾಗ, ಆರೋಪಿ ಕಳಾರ ನಿವಾಸಿ ಮುಹಮ್ಮದ್ ತ್ವಾಹ ಕೆ ( ಪ್ರಾಯ 18 ವರ್ಷ, ತಂದೆ ಸುಕುರ್ ಕಳಾರ ಕಾಲೊನಿ ) ಎಂಬುವವವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಂತರ ತನಿಖೆ ನಡೆಸಿ ಈ ಬಗ್ಗೆ ಆರೋಪಿಯನ್ನು ವಿಚಾರಣೆ ನಡೆಸಿದಾಗ, ಆರೋಪಿಯು ಮಾದಕ ವಸ್ತುವಾದ ಗಾಂಜಾವನ್ನು ಸಿಗರೇಟ್ ನಲ್ಲಿ ತುಂಬಿಸಿ ಸೇವಿಸಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೂಡಲೇ ಆತನನ್ನು ವೈದ್ಯಕೀಯ ಪರೀಕ್ಷೆ ಗಾಗಿ ಮಂಗಳೂರಿನ ಕೆ. ಎಸ್. ಹೆಗಡೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು,ಆಸ್ಪತ್ರೆ ವೈದ್ಯಾಧಿಕಾರಿಯವರು ಆರೋಪಿ ಮಹಮ್ಮದ್ ತ್ವಾಹ ಕೆ ಎಂಬಾತನು ಗಾಂಜಾ ಸೇವಿಸಿರುವುದು ದೃಡಪಟ್ಟಿದೆ ಎಂದು ದೃಢ ಪತ್ರ ನೀಡಿದ್ದಾರೆ.
ಮಾದಕ ವಸ್ತು ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಯಾದ ಮಹಮ್ಮದ್ ತ್ವಾಹ ಎಂಬುವವನ ವಿರುದ್ಧ ಕಡಬ ಪೋಲಿಸ್ ಠಾಣೆ ಯಲ್ಲಿ ಅ ಕ್ರ ನಂಬ್ರ : 91/2022 ಕಲಂ:27(b) NDPS ACT-1985 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬದಲ್ಲಿ ಹಬ್ಬಿರುವ ಈ ಮಾದಕ ವಸ್ತು ಮಾಫಿಯಾ ವನ್ನು ಬೇರು ಸಮೇತ ಕಿತ್ತೆಸಯದಿದ್ದರೆ, ಮುಂದೊಂದು ದಿನ ಯುವಜನಾಂಗಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಪೋಲಿಸರು ಮಧ್ಯರಾತ್ರಿ ಕಾರ್ಯಾಚರಿಸುವ ಕೆಲವು ಅಂಗಡಿಗಳ ಬಗ್ಗೆ ನಿಗಾವಹಿಸಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ಶಾಶ್ವತ ತಡೆಗಟ್ಟಬೇಕೆಂದು ಸಾರ್ವಜನಿಕ ವಲಯದಲ್ಲಿ ಜನರು ಮಾತನಾಡುತ್ತಿದ್ದಾರೆ.