ನ್ಯೂಸ್ ಆ್ಯರೋ : ಹಿಂದುತ್ವದ ಮೇಲಿನ ದ್ವೇಷದಿಂದಲೇ ಹೊನ್ನಾವರದ ಪರೇಶ್ ಮೇಸ್ತಾ ಕೊಲೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಸಿಬಿಐ ವತಿಯಿಂದ ಅಚ್ಚರಿಯ ವರದಿ ಸಲ್ಲಿಕೆಯಾಗಿದೆ. ಪರೇಶ್ ಸಾವಿಗೆ ಸಂಬಂಧಿಸಿದಂತೆ ಸಿಬಿಐನಿಂದ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು, ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ. ಆಕಸ್ಮಿಕವಾಗಿ ಸಾವು ಎಂದು ಸಿಬಿಐ ವರದಿ ಸಲ್ಲಿಸಿದೆ.
ಇಂದು ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ ತಂಡ ವರದಿ ಸಲ್ಲಿಸಿದ್ದು, ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವಂಬರ್ 16 ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.
ಏನಿದು ಪ್ರಕರಣ?
2017 ರ ಡಿಸೆಂಬರ್ 6 ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಹೊನ್ನಾವರ ನಗರದ ಶನಿದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದ್ದು, ಪ್ರತಿಭಟನೆಗಳೂ ನಡೆದಿದ್ದರಿಂದ ಗಲಭೆಗೂ ಕಾರಣವಾಗಿತ್ತು.
ಅಂದಿನ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ ಗೆ ವಹಿಸಿತ್ತು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿತ್ತು. ನಾಲ್ಕೂವರೆ ವರ್ಷದ ನಂತರ ಸಿಬಿಐ ನಿಂದ ವರದಿ ಸಲ್ಲಿಕೆಯಾಗಿದ್ದು, ಪರೇಶ್ ಸಾವು ಆಕಸ್ಮಿಕ ಎಂದಿರುವುದು ಇದು ಇನ್ಯಾವ ತಿರುವು ಪಡೆಯಲಿದೆಯೋ ಕಾದು ನೋಡಬೇಕಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..