ಹೊಸ ಅವತಾರದಲ್ಲಿ ಕಾಣಿಸಿಕೊಂಡ ಡ್ರೋನ್ ಪ್ರತಾಪ್ – ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಚಿತ್ರಕ್ಕೆ ನೆಟ್ಟಿಗರು ಶಾಕ್..!! ಯಾಕ್ ಗೊತ್ತಾ…!?

ನ್ಯೂಸ್ ಆ್ಯರೋ : ಡ್ರೋನ್ ಸಂಬಂಧ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಮಂಡ್ಯದ ಮಳವಳ್ಳಿ ಮೂಲದ ಪ್ರತಾಪ್ (ಡ್ರೋನ್ ಪ್ರತಾಪ್), ಇದೀಗ ಮತ್ತೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಕುತೂಹಲವನ್ನು ಮೂಡಿಸಿದ್ದಾರೆ. ಇವರು ಡ್ರೋನ್ ವಿವಾದದ ನಂತರ ಸಾಮಾಜಿಕ ಜಾಲತಾಣದಲ್ಲಿ ಅಷ್ಟೊಂದು ಸಕ್ರಿಯವಾಗಿರಲ್ಲಿಲ್ಲ.
ಇದೀಗ ದಿಢೀರ್ ಆಗಿ ಕಣ್ಣಿಗೆ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಮಿಷಿನ್ ಹಿಡಿದು ನಗುತ್ತಾ ಕ್ಯಾಮೆರಾಗೆ ಫೋಸ್ ನೀಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೆ ಹೊಸ ಕಾರುಬಾರು ಶುರು ಮಾಡಿದ ಮುನ್ಸೂಚನೆಯನ್ನು ನೀಡಿದ್ದಾರೆ.
ಅದಲ್ಲದೆ ಫೋಟೋದ ಕೆಳಗಡೆ ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ಶುರುವಾಗಲು ಪ್ರಾರಂಭಿಸುತ್ತವೆ’ ಎಂಬ ಅಡಿ ಬರಹವನ್ನು ಬರೆದುಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ಹಂಚಿಕೊಂಡಿರುವ ಫೋಟೋಗೆ ನೆಟ್ಟಿಗರು ಭಾರೀ ಪ್ರತಿಕ್ರಿಯೆಯನ್ನು ನೀಡುತ್ತಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಕೈಗೆ ದೊಡ್ಡ ಹಳದಿ ಗ್ಲೌಸ್ ಕಟ್ಟಿಕೊಂಡು ಟೇಬಲ್ ಮೇಲೊಂದು ಲ್ಯಾಪ್‌ಟಾಪ್ ಇಟ್ಟು, ಅದಕ್ಕೆ ಡಾಟಾ ಕೇಬಲ್ ಅಳವಡಿಸುತ್ತಿರುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಪ್ರತಾಪ್ ತಾನೊಬ್ಬ ಯುವ ವಿಜ್ಞಾನಿ ಎಂದು ವಿದೇಶಗಳಲ್ಲಿ ಡ್ರೋನ್ ಪ್ರದರ್ಶನದಲ್ಲಿ ಚಿನ್ನದ ಪದಕ ಗಳಿಗೆ ನಾಡಿಗೆ ಹೆಮ್ಮೆ ತಂದಿದ್ದೇನೆ ಎಂದು ಭಾರೀ ಪ್ರಚಾರವನ್ನು ಪಡೆದುಕೊಂಡಿದ್ದರು. ಈ ಸಂಬಂಧ ವೆಬ್‌ಸೈಟ್‌ವೊಂದು ಫ್ಯಾಕ್ಟ್‌ಚೆಕ್ ಪ್ರಕಟಿಸಿತ್ತು. ಅದರಲ್ಲಿ ಡ್ರೋನ್ ಪ್ರತಾಪ್ ಅಂತಹ ಯಾವುದೇ ಸಾಧನೆಯನ್ನು ಮಾಡಿಲ್ಲ, ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ವರದಿಯನ್ನು ಪ್ರಕಟಿಸಿತ್ತು.
ಈ ವಿಚಾರ ರಾಜ್ಯದ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗಿದ್ದವು. ಅದಲ್ಲದೆ ಪ್ರತಾಪ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಪೊಲೀಸ್ ವಿಚಾರಣೆಗಳು ಎದುರಿಸಿದ ಬಳಿಕ ಅವರು ಕಣ್ಮರೆಯಾಗಿದ್ದರು. ಇದೀಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.