ಮುರುಘಾ ಮಠದ ಶ್ರೀ ವಿರುದ್ಧ ಪೊಕ್ಸೊ ಪ್ರಕರಣದ ಪಿತೂರಿ ಆರೋಪ – ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅರೆಸ್ಟ್, ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ

ನ್ಯೂಸ್ ಆ್ಯರೋ : ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 9 ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುರುಘಾ ಮಠದ ಉಸ್ತುವಾರಿ ಬಸವಪ್ರಭುಶ್ರೀ ದೂರು ನೀಡಿದ್ದರು. ಸ್ವಾಮೀಜಿ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಪಿತೂರಿ ನಡೆದಿದೆ ಎಂದು ಅವರು ದೂರು ನೀಡಿದ್ದರು.
ಸಂತ್ರಸ್ತೆಗೆ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದ್ದು, ಈ ಕುರಿತಾದ ಆಡಿಯೋ ವೈರಲ್ ಆಗಿತ್ತು. ನವೆಂಬರ್ 10 ರಂದು ಬಸವರಾಜೇಂದ್ರನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ನವೆಂಬರ್ 10ರಂದು ರಾತ್ರಿ ಮಾಜಿ ಶಾಸಕ ಬಸವರಾಜನ್ ಅವರನ್ನು ಬಂಧಿಸಲಾಗಿತ್ತು. ಪತಿ ಬಂಧನವಾದ ನಂತರ ಪತ್ನಿ ಸೌಭಾಗ್ಯ ಬಸವರಾಜನ್ ನಾಪತ್ತೆಯಾಗಿದ್ದರು.
ಹಿಂದೆ ಮಠದ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧ ದೂರು ನೀಡುವಂತೆ ಬಾಲಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಚಿತ್ರದುರ್ಗ ಪೊಲೀಸರು ಮಠದ ಅಡುಗೆ ಸಹಾಯಕಿಯನ್ನು ಬಂಧಿಸಿದ್ದರು. ಮುರುಘಾಶ್ರೀ ವಿರುದ್ಧ ಎರಡನೇ ಪೋಕ್ಸೋ ದೂರು ನೀಡಿದ್ದ ಈ ಮಹಿಳೆಯನ್ನು ಪೊಲೀಸರು ವಿಚಾರಣೆಗೆಂದು ನವೆಂಬರ್ 10ರಂದು ವಿಚಾರಣೆ ನಡೆಸಿ ನವೆಂಬರ್ 11ರಂದು ಬಂಧಿಸಿದ್ದರು.
ಆಡಿಯೋದಲ್ಲಿ ಮುಖ್ಯವಾಗಿ ಹೇಳಿರುವುದು ಏನು?
ಮುರುಘಾ ಶರಣರ ವಿರುದ್ಧ ಸುಳ್ಳು ದೂರು ನೀಡುವಂತೆ ವ್ಯಕ್ತಿಯೊಬ್ಬರು ಸಂತ್ರಸ್ತೆಗೆ ಕರೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಭಾಷಣೆ 14 ನಿಮಿಷ 15 ಸೆಕೆಂಡ್ ಕಾಲ ಇದ್ದು, ಕರೆ ಮಾಡಿದ ವ್ಯಕ್ತಿ ಬಾಲಕಿಗೆ ಸುಳ್ಳು ದೂರು ನೀಡುವಂತೆ ಪ್ರಚೋದನೆ ಮಾಡಿದ್ದಲ್ಲದೆ, ಸಹಾಯ ಮಾಡುವುದಾಗಿ ಆಮಿಷವನ್ನೂ ಒಡ್ಡಿದ್ದನು.
ಸದ್ಯ ಸೌಭಾಗ್ಯ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಇಂದು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.