ನ್ಯೂಸ್ ಆ್ಯರೋ : ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಂದ 5 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪದ ಮೇರೆಗೆ ಇನ್ಸ್ಪೆಕ್ಟರ್ ಸೇರಿ ನಾಲ್ವರು ಪೊಲೀಸರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಂಪುರ ಪೊಲೀಸ್ ಇನ್ಸ್ಪೆಕ್ಟರ್ ನಿಂಗರಾಜು ಹಾಗೂ ಮೂವರು ಕಾನ್ಸ್ಟೆಬಲ್ ವಿರುದ್ದ ಎಫ್‌ಐಆರ್ ದಾಖಲಾಗಿದ್ದು, ಈ ಆರೋಪಿಗಳು ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಎಂಬವರನ್ನು ಮೇ 11ರಂದು ತಡೆದು ಹಣ ವಸೂಲಿ ಮಾಡಿದ ಆರೋಪ ಹೊರಿಸಲಾಗಿದೆ.
ಸಂತ್ರಸ್ತರಾಗಿರುವ ಭಗವಾನ್ ದಾವಣಗೆರೆಯಿಂದ ಹಾಸನ ಜಿಲ್ಲೆಯ ಬೇಲೂರಿಗೆ ಚಿನ್ನ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿತ್ತು. ಭಗವಾನ್ 2.45 ಕೆ.ಜಿ. ಚಿನ್ನವನ್ನು ತನ್ನ ಕಾರಿನಲ್ಲಿ ಕೊಂಡೊಯ್ಯುತ್ತಿದ್ದಾಗ ಅಡ್ಡಗಟ್ಟಿದ್ದ ಪೊಲೀಸರು ಅದನ್ನು ಕಳ್ಳಮಾಲು ಎಂದು ಬೆದರಿಸಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಪಿಐ ನಿಂಗರಾಜು 5 ಲಕ್ಷ ರೂಪಾಯಿಗೆ ಸೆಟ್ಲ್ ಮಾಡಿದ್ದರು. ಈ ಸಂಬಂಧ ಜು. 21ರಂದು ಆಗಿನ ಚಿಕ್ಕಮಗಳೂರು ಎಸ್ಪಿಗೆ ಭಗವಾನ್ ದೂರು ನೀಡಿದ್ದರು.
ಭಗವಾನ್ ದೂರಿನ ಮೇರೆಗೆ ತನಿಖೆ ನಡೆಸುವಂತೆ ಆಗಿನ ಎಸ್ಪಿ, ಸದ್ಯ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಆದೇಶ ಮಾಡಿದ್ದರು. ಅದರಂತೆ ತನಿಖೆ ನಡೆದು ವರದಿ ಬಂದಿದ್ದು, ಕಳೆದ 17ರಂದು ಅಜ್ಜಂಪುರ ಠಾಣೆಯಲ್ಲಿ ದರೋಡೆ ಪ್ರಕರಣ ಎಂದು ಈ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..