ಹಾಸನಾಂಬೆ ದೇಗುಲದಲ್ಲಿ ಜಿಲ್ಲಾ ಪಂಚಾಯತ್ ನೌಕರನ ಕಪಾಳಕ್ಕೆ ಬಾರಿಸಿದ ಹಾಸನ ಎಸಿ – ಸರ್ಕಾರಿ ಅಧಿಕಾರಿಯ ದರ್ಪಕ್ಕೆ ವ್ಯಾಪಕ ಆಕ್ರೋಶ..!!

ನ್ಯೂಸ್ ಆ್ಯರೋ : ಹಾಸನಾಂಬೆ ದೇಗುಲದಲ್ಲಿ ಎಸಿ ಜಗದೀಶ್ ದರ್ಪ ತೋರಿದ್ದಾರೆ. ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಸರತಿ ಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ದೇವಾಲಯಕ್ಕೆ ನುಗ್ಗಿದಕ್ಕೆ ಹಾಸನದ ಉಪವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ.
ಕುಟುಂಬಸ್ಥರು, ಭಕ್ತರು, ಅಧಿಕಾರಿಗಳು ನಡುವೆ ಎಸಿ ಜಗದೀಶ್ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಎಸಿ ಜಗದೀಶ್ ಅವರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದ್ದು ಲಕ್ಷಾಂತರ ಜನ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಅದರಂತೆಯೇ ದೇವಿ ದರ್ಶನಕ್ಕಾಗಿ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಅವರು ತಮ್ಮ ಪರಿವಾರ ಸಮೇತರಾಗಿ ದೇವಿ ದರ್ಶನಕ್ಕೆ ಬಂದಿದ್ದಾರೆ.
ಈ ವೇಳೆ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮನವಿ ಮಾಡಿ ವಿಐಪಿ ಗೇಟ್ ನಲ್ಲಿ ಎಂಟ್ರಿ ಆಗಿದ್ಸು, ಇದನ್ನು ಕಂಡ ಎಸಿ ಜಗದೀಶ್ ಅವರು ಶಿವೇಗೌಡರನ್ನು ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿಯೇ ನಿಲ್ಲಿಸಿ ಯಾಕೋ ಓಡಿ ಬರ್ತಿದ್ದಿಯಾ? ನಿನಗೆ ಈ ಗೇಟ್ ನಲ್ಲಿ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಕ್ಯೂ ನಲ್ಲಿ ಹೋಗೋದ್ ಬಿಟ್ಟು ಇಲ್ಲಿ ಯಾಕೆ ಬರ್ತಿದ್ದಿಯಾ ಅಂತ ಸಿಟ್ಟಾಗಿದ್ದಾರೆ. ಆಗ ಶಿವೇಗೌಡರು ತಾನೂ ಜಿ.ಪಂ ನೌಕರ ಎಂದು ಗುರುತಿನ ಚೀಟಿ ತೋರಿಸಿದ್ದು, ಎಸಿ ಜಗದೀಶ್ ಶಿವೇಗೌಡರು ಧರಿಸಿದ್ದ ಕಾರ್ಡ್ ಕಿತ್ತು ಎಸೆದಿದ್ದಾರೆ. ಅಲ್ಲದೇ ಶಿವೇಗೌಡ ಕುಟುಂಬದವರ ಮುಂದೆಯೇ ಕಪಾಳಮೋಕ್ಷ ಮಾಡಿದ್ದು, ಸಣ್ಣ ಕಾರಣಕ್ಕೆ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದ ಎಸಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ಹಾಸನಾಂಬ ದರ್ಶನ ಪ್ರಾರಂಭವಾದ ಬಳಿಕ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರತಿ ನಿತ್ಯ ಸಾವಿರಾರು ಭಕ್ತಾದಿಗಳು ದರ್ಶನ ಪಡೆಯುತ್ತಿದ್ದಾರೆ. ಆದರೆ ದರ್ಶನಕ್ಕೆ ಬಂದ ಭಕ್ತಾಧಿಗಳ ನಡುವೆಯೇ ಇಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಮಾಡಿರೋ ಎಡವಟ್ಟಿನಿಂದಾಗಿ ಬೇರೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಲೆ ತಗ್ಗಿಸುವಂತಾಗಿದೆ.