ಗ್ರಾಹಕರಿಗೆ ಶಾಕ್ ನೀಡಿದ್ದ ಕೆಎಂಎಫ್ – ಹಾಲು ಮೊಸರಿನ ದರ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ತಡೆ

ನ್ಯೂಸ್ ಆ್ಯರೋ : ಈಚೆಗೆ ಹಾಲು ಮತ್ತು ಮೊಸರು ದರದಲ್ಲಿ ಏರಿಕೆ ಮಾಡಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳಿ ಗ್ರಾಹಕರಿಗೆ ಶಾಕ್ ನೀಡಿತ್ತು. ಇದೀಗ ಹಾಲಿನ ದರ ಏರಿಕೆ ಬಗ್ಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಈ ತಿಂಗಳ 20 ಒಳಗೆ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.
ಈ ಬಗ್ಗೆ ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಹಾಗೂ ಮೊಸರಿನ ಬೆಲೆ ಏರಿಕೆ ಸಂಬಂಧ ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ರ ಒಳಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಗ್ರಾಹಕರಿಗೆ ಶಾಕ್ ನೀಡಿದ್ದ ಕೆಎಂಎಫ್:
ನಂದಿನ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಆದೇಶ ಹೊರಡಿಸಿತ್ತು. ಇದರಿಂದ ರೈತರಿಗೆ ವರದಾನವಾಗಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20 ರಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
ಕಳೆದ 8 ತಿಂಗಳಿನಿಂದ ಹಾಲು ಒಕ್ಕೂಟಗಳ ಮನವಿಯಂತೆ ಕೆಎಂಎಫ್ ರಾಜ್ಯ ಸರ್ಕಾರಕ್ಕೆ ಹಾಲು ಹಾಗೂ ಮೊಸರಿನ ಬೆಲೆಯಲ್ಲಿ ಏರಿಕೆ ಮಾಡುವಂತೆ ಮನವಿ ಮಾಡಿತ್ತು. ಆದರೆ ಸರ್ಕಾರ ಸ್ಪಂದಿಸಿರಲಿಲ್ಲ. ಹೀಗಾಗಿ ರೈತರು ಒತ್ತಾಸೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ, ಕೆಎಂಎಫ್ ಹಾಲಿನ ಬೆಲೆ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಇದೀಗ ಸಿಎಂ ಬೊಮ್ಮಾಯಿ ಅವರು ಅದಕ್ಕೆ ತಡೆ ತಂದಿದ್ದಾರೆ.