ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ – ನದಿಯಲ್ಲಿದ್ದ ಕಾರ್ ನಲ್ಲಿತ್ತು ಶವ, ಸಿಸಿಟಿವಿಯ ಸೆರೆಯಾದ ಕಾರ್ ನಲ್ಲಿದ್ದ ಉಳಿದವರು ಯಾರು..?

ನ್ಯೂಸ್ ಆ್ಯರೋ : ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಶವ ನಾಲ್ಕು ದಿನಗಳ ಬಳಿಕ ಇದೀಗ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.
ಆದರೆ ಇದೀಗ ಆಶ್ಚರ್ಯವೆಂಬಂತೆ ಹೊನ್ನಾಳಿ ಎಚ್. ಕಡದಕಟ್ಟೆ ಮಧ್ಯದ ಕಾಲುವೆಗೆ ಕಾರು ಬಿದ್ದಿದೆ. ವಿಷಯ ತಿಳಿದು ಓಡೋಡಿ ಬಂದ ರೇಣುಕಾಚಾರ್ಯ ಶವ ಕಂಡು ಸ್ಥಳದಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಘಟನಾ ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿದ್ದು, ಚಂದ್ರಶೇಖರ್ ಮೃತದೇಹವನ್ನು ಪೊಲೀಸರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾರೆ.
ಹತ್ತಾರು ಅನುಮಾನ? ಕಾರ್ ನಲ್ಲಿದ್ದ ಉಳಿದವರು ಎಲ್ಲಿ? ಸಿಸಿಟಿವಿ ಸಾಕ್ಷ್ಯ ಏನಿದೆ?
ಚಂದ್ರಶೇಖರ್ ಶವ ಪತ್ತೆಯಾದ ಬೆನ್ನಲ್ಲೇ ಹತ್ತಾರು ಅನುಮಾನಗಳು ವ್ಯಕ್ತವಾಗಿವೆ.ಕಾರ್ ನಲ್ಲಿ ಚಂದ್ರಶೇಖರ್ ಜೊತೆಗೆ ಮತ್ತೊಬ್ಬರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಕಾರ್ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. ಆದರೆ, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳು ಕಾರ್ ಮುಂಭಾಗದಲ್ಲಿ ಇಬ್ಬರು ಕುಳಿತುಕೊಂಡಿರುವುದು ಕಂಡು ಬಂದಿದೆ.
ಚಂದ್ರು ಜೊತೆಗೆ ಕಾರ್ ನಲ್ಲಿ ಮತ್ತೊಬ್ಬರು ಪ್ರಯಾಣಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆದರೆ ನಾಲೆಯಲ್ಲಿ ಪತ್ತೆಯಾಗಿರುವ ಕಾರ್ ನಲ್ಲಿ ಚಂದ್ರಶೇಖರ್ ಮೃತ ದೇಹ ಮಾತ್ರ ಕಂಡುಬಂದಿದೆ. ಭಾನುವಾರದಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದೆ. ಹೊನ್ನಾಳಿಯಿಂದ 5 ಕಿಲೋ ಮೀಟರ್ ದೂರದಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ವಿಧಿ ವಿಜ್ಞಾನ ತಂಡದವರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊನ್ನಾಳಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.