ತುರ್ತು ಹೃದಯ ಚಿಕಿತ್ಸೆಗೆ ನೆರವಾಗಲು ಸಿಗ್ನಲ್‌ನಲ್ಲೇ ಇರಲಿದೆ ಕ್ಯೂಆರ್ ಕೋಡ್ – ಬಿಬಿಎಂಪಿ, ಸಂಚಾರಿ ಪೊಲೀಸರ ಸಹಯೋಗದಲ್ಲಿ ಹೊಸ ಯೋಜನೆ

ನ್ಯೂಸ್ ಆ್ಯರೋ : ವಿಶ್ವ ಹೃದಯ ದಿನದ ಪ್ರಯುಕ್ತ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಬೆಂಗಳೂರಿನಲ್ಲಿ QR ಕೋಡ್ ಮೂಲಕ ಸ್ಪಂದಿಸುವ ಡಿಜಿಟಲ್ ಪರಿಹಾರ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.
ಮಣಿಪಾಲ್ ಆಸ್ಪತ್ರೆಗಳ ಸಮೂಹವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸರ ಸಹಯೋಗದೊಂದಿಗೆ ಇಂತದ್ದೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಳಸಲು ನಗರದ ಪ್ರಮುಖ ವೃತ್ತ ಮತ್ತು ಟ್ರಾಫಿಕ್ ಸಿಗ್ನಲ್ ಜಂಕ್ಷನ್‌ಗಳಲ್ಲಿ ಕ್ಯೂಆರ್ ಕೋಡ್‌ಗಳುಳ್ಳ ಫಲಕಗಳನ್ನು ಅಳವಡಿಸಿದೆ.
ಯಾರಿಗಾದರೂ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಾಗ ಪ್ರಾಥಮಿಕ ಅಥವಾ ತುರ್ತು ಚಿಕಿತ್ಸೆಗೆ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ, ವೈದ್ಯಕೀಯ ಸೇವೆ ಪಡೆದುಕೊಳ್ಳಬಹುದಾಗಿದೆ. QR ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ವ್ಯಕ್ತಿಗೆ ತುರ್ತು ಸಂಖ್ಯೆಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ, ಒಂದೇ ಕ್ಲಿಕ್ ಮೂಲಕ ಆಂಬುಲೆನ್ಸ್ ಸೇವೆಗೆ ನಿರ್ದೇಶಿಸಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.
ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ದೀಪಕ್ ವೇಣುಗೋಪಾಲನ್ ಮಾತನಾಡಿ, ವೈದ್ಯಕೀಯ ತುರ್ತುಸ್ಥಿತಿ ಸಮಯಗಳಲ್ಲಿ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಹೀಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರ ಸಹಾಯದಿಂದ ಎಲ್ಲಾ ಸಿಗ್ನಲ್‌ಗಳಲ್ಲಿ QR ಕೋಡ್ ಫಲಕಗಳನ್ನು ಆಳವಡಿಸಲಾಗಿದೆ ಎಂದಿದ್ದಾರೆ.
ಹೃದಯ ಮತ್ತು ಶ್ವಾಸಕೋಶ ಪ್ರಚೋದಕ (CPR) ವಿಧಾನದಿಂದ ವ್ಯಕ್ತಿಯ ಜೀವ ಉಳಿಸಲು ಸಾಧ್ಯ. ಇದನ್ನು ಯಾವ ರೀತಿ ಬಳಸಬಹುದು ಎಂದು ಹೆಚ್ಚು ಜನರಿಗೆ ತಿಳಿದಿಲ್ಲ. ತುರ್ತು ಸಂದರ್ಭದಲ್ಲಿ ಆದಷ್ಟು ಬೇಗ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುವ ಉದ್ದೇಶದಿಮದ QR ಕೋಡ್‌ಗಳನ್ನು ರೂಪಿಸಲಾಗಿದೆ ಎಂದು ವಿವವರಿಸಿದ್ದಾರೆ.
ಆಸ್ಪತ್ರೆ ಆಯೋಜಿಸಿದ್ದ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ (CPR) ತರಬೇತಿ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಹೃದಯ ಸ್ತಂಭನಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಸಿಪಿಆರ್ ಕ್ರಮದ ಬಗ್ಗೆ ತಿಳಿಸುವ ಕ್ಯೂಆರ್ ಕೋಡ್ ಅನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ.
ವ್ಯಕ್ತಿ ಚೇತರಿಕೆಗೆ ಅನುಸರಿಸಬೇಕಾದ ಕ್ರಮಗಳನ್ನು ಈ QR ಕೋಡ್ ವಿವರಿಸುತ್ತದೆ. CPR ಜೀವ ಉಳಿಸುವ ತಂತ್ರವಾಗಿದ್ದು, ಇದರ ಕೌಶಲ್ಯಗಳನ್ನು ತಿಳಿದುಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಲಾಗಿದೆ.