ಕೇಸು ಸೋತಿದ್ದಕ್ಕೆ ವಕೀಲರ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದ ರಾಜೀವ್ ಗಾಂಧಿ ವಿವಿ – 15 ವರ್ಷಗಳ ಬಳಿಕ ತೀರ್ಪು, ವಿವಿ ವಿರುದ್ಧ ಚಾಟಿ ಬೀಸಿದ ಹೈಕೋರ್ಟ್

ನ್ಯೂಸ್ ಆ್ಯರೋ : ನ್ಯಾಯಾಲಯ ಪ್ರಕರಣದಲ್ಲಿ ಹಿನ್ನಡೆಯಾಗಿದ್ದಕ್ಕೆ ತನ್ನದೇ ವಿಶ್ವವಿದ್ಯಾಲಯ ವಕೀಲರ ಸಮಿತಿಯಲ್ಲಿದ್ದ ವಕೀಲರ ವಿರುದ್ಧ ವಂಚನೆಯ ಕ್ರಿಮಿನಲ್ ಮೊಕದ್ದಮೆ ಹೂಡಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಹೆಚ್‌ಎಸ್) ಮತ್ತು ಅದರ ರಿಜಿಸ್ಟ್ರಾರ್ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ, ಆ ವಕೀಲರೊಬ್ಬರ ವಿರುದ್ಧ ಹೂಡಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದೆ.
ಧಾರವಾಡದಲ್ಲಿ 15 ವರ್ಷಗಳಿಂದ ಆರ್‌ಜಿಯುಎಚ್ಎಸ್ ಪರ ವಾದ ಮಂಡಿಸುತ್ತಿದ್ದ ವಕೀಲ ಶಿವಕುಮಾರ್ ಎಸ್. ಬಾಡವಾಡಗಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧದ ಎಫ್ ಐಆರ್ ರದ್ದು ಪಡಿಸಿದೆ.
ಅಲ್ಲದೇ ಇಂತಹ ದೂರು ದಾಖಲಿಸುವಾಗ ಎಚ್ಚರಿಕೆ ವಹಿಸುವಂತೆ ಆರ್‌ಜಿಯುಎಚ್‌ಎಸ್ ಮತ್ತದರ ರಿಜಿಸ್ಟ್ರಾರ್‌ಗೆ ತಾಕೀತು ಮಾಡಿದ್ದು, ನ್ಯಾಯಪೀಠ, ಇಂಥ ಘಟನೆ ಮರುಕಳಿಸಿದರೆ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಏನಿದು ಪ್ರಕರಣ?
ಸ್ನಾತಕೋತ್ತರ ಪ್ರವೇಶ ಪರೀಕ್ಷೆ-2010ರ ಅವ್ಯವಹಾರ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ ಕೋರ್ಟ್‌ನಲ್ಲಿ ಅರ್ಜಿದಾರ ವಕೀಲರು ವಿವಿ ಪ್ರತಿನಿಧಿಸಿದ್ದರು ಮತ್ತು ಕೋರ್ಟ್ ಸೂಚನೆಯ ಮೇರೆಗೆ ಆರ್‌ಜಿಯುಹೆಚ್‌ಎಸ್ ಪರವಾಗಿ ನೋಟಿಸ್ ಸ್ವೀಕರಿಸಿದ್ದರು. ಇತರ ಆರೋಪಿಗಳು ಸಲ್ಲಿಸಿದ ಇದೇ ರೀತಿಯ ಅರ್ಜಿಯಲ್ಲಿ ಹಿಂದೆ ನೀಡಲಾದ ಆದೇಶದ ಪ್ರಕಾರ, ಹೈಕೋರ್ಟ್ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು.
ಶಿವಕುಮಾರ್ ಕೋರ್ಟ್ ಆದೇಶ ತಿಳಿಸಿದ ನಂತರ, ವಿವಿ 2022ರ ಜು.29ರಂದು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು. ಅವರು ಆರೋಪಿಗಳ ಜೊತೆ ಸೇರಿಕೊಂಡು ಅವರ ಅರ್ಜಿಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದಾರೆಂದು ಆರೋಪಿಸಿತ್ತು. ಅಲ್ಲದೆ, ಅವರನ್ನು ವಿಶ್ವವಿದ್ಯಾಲಯದ ವಕೀಲರ ಸಮಿತಿಯಿಂದ ತೆಗೆದುಹಾಕಲಾಗಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಇನ್ನೂ ಕೇಸ್ ನಲ್ಲಿ ಹಿನ್ನಡೆಯಾದ ಮಾತ್ರಕ್ಕೆ ವಕೀಲರು ಎದುರು ಪಕ್ಷದವರೊಂದಿಗೆ ಶಾಮೀಲಾಗಿದ್ದಾರೆ ಹಾಗೂ ಅವರಿಗೆ ಸಹಕರಿಸಿದ್ದಾರೆ ಎಂದು ಆರೋಪ ಮಾಡುವುದು ಸರಿಯಲ್ಲ. ಅಂತಹ ಅಧಿಕಾರ ವಿವಿಗೆ ಇಲ್ಲ. ನ್ಯಾಯಾಲಯದ ಮುಂದೆ ವಿವಿ ಪ್ರತಿನಿಧಿಸುವ ಅರ್ಜಿದಾರರ ಕ್ರಮ ಮತ್ತು ಹಿಂದಿನ ತೀರ್ಪು ಪರಿಗಣಿಸಿ ಅರ್ಜಿಗಳನ್ನು ನ್ಯಾಯಾಲಯ ಮಾನ್ಯ ಮಾಡಿದರೆ, ಅದು ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾರಣವಾಗುವುದಿಲ್ಲ. ಅರ್ಜಿದಾರರ ವಿರುದ್ಧ ಹೊರಿಸಲಾದ ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ.
ಆರ್‌ಜಿಯುಎಚ್‌ಎಸ್‌ನ ದೂರು ದುರುದ್ದೇಶದಿಂದ ಕೂಡಿದೆ, ಆರೋಪಗಳು ಅಸಂಬದ್ಧವಾಗಿವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯ ಪೀಠ, ಅರ್ಜಿದಾರರ ವಿರುದ್ಧ ವಿವಿ ದಾಖಲಿಸಿದ್ದ ಪ್ರಕರಣ ರದ್ದು ಪಡಿಸಿದೆ.