ಪೊಲೀಸರ ಲಂಚಕ್ಕೆ ಬ್ರೇಕ್ ಹಾಕಲು ಬಂದಿದೆ ಕ್ಯೂಆರ್ ಕೋಡ್ – ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಿದರೆ ಪೊಲೀಸರ ವಿರುದ್ಧ ಆ್ಯಕ್ಷನ್..!!

ನ್ಯೂಸ್ ಆ್ಯರೋ : ಪೊಲೀಸರ ಕರ್ತವ್ಯ ನಿರ್ವಹಣೆ ಹಾಗೂ ನಡವಳಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಬೆಂಗಳೂರಿನ ಆಗ್ನೇಯ ವಿಭಾಗದ ಠಾಣೆಗಳು ಹಾಗೂ ಎಸಿಪಿ ಕಚೇರಿಗಳಲ್ಲಿ ‘ಕ್ಯೂಆರ್ ಕೋಡ್’ ವ್ಯವಸ್ಥೆ ಅಳವಡಿಸಲಾಗಿದೆ.
ಈಗಾಗಲೇ ಆಗ್ನೇಯ ವಿಭಾಗದ ಬಂಡೇಪಾಳ್ಯ ಠಾಣೆಯಲ್ಲಿ ಕ್ಯೂಆರ್ ಕೋಡ್ ಹಾಕಲಾಗಿದೆ. ಠಾಣೆಯ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ್‌ನಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.
ಈಚೆಗೆ ಭ್ರಷ್ಟಾಚಾರ ಆರೋಪದಡಿ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಡಿಸಿಪಿ ಡಾ.ಸಿ.ಕೆ.ಬಾಬಾ ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸಲು ಕ್ಯೂಆರ್ ಕೋಡ್ ಅಳವಡಿಸಲಾಗಿದೆ.
ಆಗ್ನೇಯ ವಿಭಾಗದ 14 ಠಾಣೆಗಳಲ್ಲಿ ಮತ್ತು ಎಸಿಪಿ ಕಚೇರಿಗಳಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಕ್ಯೂಆರ್ ಕೋಡ್ ಅಳವಡಿಸಲು ಸೂಚಿಸಲಾಗಿದೆ.
ಕ್ಯೂಆರ್ ಕೋಡ್ ಬಳಸುವುದು ಹೇಗೆ?
ಠಾಣೆಗೆ ಭೇಟಿ ನೀಡುವ ಜನರು, ಪೊಲೀಸರ ಸೇವೆ ಪಡೆದ ನಂತರ ಠಾಣೆ ಎದುರು ಅಳವಡಿಸಿರುವ ಕ್ಯೂಆರ್ ಕೋಡನ್ನು ಮೊಬೈಲ್‌ನಲ್ಲಿ ಸ್ಕಾನ್ ಮಾಡಬೇಕು. ಲಿಂಕ್ ಲಭ್ಯವಾಗಿ ಅಲ್ಲಿ ಕೇಳುವ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯ ಬರೆಯಬೇಕು. ಪೊಲೀಸರು ಲಂಚ ಕೇಳಿದ ಬಗ್ಗೆ, ಪೊಲೀಸರ ವರ್ತನೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಲ್ಲದೆ ಠಾಣೆ ವ್ಯವಸ್ಥೆ ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆ ಬಗ್ಗೆ ಸಲಹೆಯನ್ನು ನಾಗರಿಕರು ತಿಳಿಸಬಹುದಾಗಿದೆ.
ಏನಾದರೂ ಪೊಲೀಸರ ವಿರುದ್ಧ ಹೇಳಿಕೆಯನ್ನು ಕೊಟ್ಟರೆ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರೊಂದಿಗೆ ಸೌಹಾರ್ದವಾಗಿ ವರ್ತಿಸಲು ಪೊಲೀಸರಿಗೆ ಸೂಚನೆ:
ಸಾರ್ವಜನಿಕರ ಜತೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಆಸ್ಪತ್ರೆಗೆ ತೆರಳುತ್ತಿರುವವರನ್ನು ಅನಗತ್ಯವಾಗಿ ಅಡ್ಡಗಟ್ಟಿ ಪರಿಶೀಲಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ವೇಳೆ ಓಡಾಡುವ ಸಾರ್ವಜನಿಕರ ಜತೆ ಗೌರವಯುತ ವರ್ತಿಸಿ ಅವರಿಗೆ ತಿಳಿವಳಿಕೆ ಹೇಳಬೇಕು. ಶಂಕಾಸ್ಪದ ವ್ಯಕ್ತಿಗಳು ಕಂಡುಬಂದರೆ ಎಂಸಿಸಿಟಿಎನ್‌ಎಸ್ ತಂತ್ರಾಂಶದಲ್ಲಿ ಬೆರಳಚ್ಚು ಪರಿಶೀಲನೆ ನಡೆಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುವಂತೆ ಸಿಬ್ಬಂದಿಗೆ ಡಿಸಿಪಿ ಸೂಚಿಸಿದ್ದಾರೆ.
ಕ್ಯೂಆರ್ ಕೋಡ್ ಅಳವಡಿಸಿರುವ ಠಾಣೆಗಳು
- ಮಡಿವಾಳ ಉಪ ವಿಭಾಗ- ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಆಡುಗೋಡಿ
- ಮೈಕೋ ಲೇಔಟ್ ಉಪ ವಿಭಾಗ- ತಿಲಕನಗರ, ಮೈಕೋ ಲೇಔಟ್, ಬೊಮ್ಮನಹಳ್ಳಿ, ಸದ್ದುಗುಂಟೆಪಾಳ್ಯ
- ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ- ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೆಪಾಳ್ಯ, ಬೇಗೂರು ಹಾಗೂ ಪರಪ್ಪನ ಅಗ್ರಹಾರ